ಕೆಜೆಪಿ ನೇತೃತ್ವದ ಸರ್ಕಾರ ರಚನೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 18
ಕರ್ನಾಟಕ ಜನತಾ ಪಕ್ಷಕ್ಕೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಜಿ ಸಚಿವ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಂ. ಉದಾಸಿ ಹೇಳಿದರು.
ತಾಲೂಕಿನ ಮಾರನಬೀಡ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೆ ಹಾವೇರಿಯಲ್ಲಿ ಉದಯಿಸಿದ ಕರ್ನಾಟಕ ಜನತಾ ಪಕ್ಷ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರದಲ್ಲಿ ಜಯಭೇರಿ ಬಾರಿಸಲಿದೆ. ಅತಿ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಜನಮನ್ನಣೆಗೆ ಪಾತ್ರವಾಗಿರುವ ಕೆಜೆಪಿ, ಯಡಿಯೂರಪ್ಪನವರ ಅಭಿವೃದ್ಧಿಪರ ಕಾಳಜಿ, ಜನಪರ ಯೋಜನೆಗಳ ಅನುಷ್ಠಾನ, ಸಂಧ್ಯಾಸುರಕ್ಷಾ, ಭಾಗ್ಯಲಕ್ಷ್ಮೀ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ಶೇ. 70ರಷ್ಟು ಜನರನ್ನು ತಲುಪಿವೆ. ಮತದಾರರು ಈ ಎಲ್ಲ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಸರ್ಕಾರಗಳ ಸಾಧನೆಗೂ ಯಡಿಯೂರಪ್ಪನವರ ಅವಧಿಯಲ್ಲಿನ ಸಾಧನೆಗೂ ಹೋಲಿಕೆ ಮಾಡಿ ನೋಡಿದ್ದಾರೆ. ಹೀಗಾಗಿ ಕೆಜೆಪಿ ಬೆಂಬಲಿಸಲು ಮತದಾರ ನಿರ್ಧರಿಸಿದ್ದಾನೆ ಎಂದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ ಮಾರನಬೀಡ ಗ್ರಾಮದ ಖಾದರಸಾಬ ವಾಲಗದ, ಲಾಲಾಸಾಬ ಕ್ವಾಟಿ, ಮರದಾನಸಾಬ ಸವೂರ, ಮಹಮ್ಮದ್ ನದಾಫ, ದಾವೂದಲಿ ಬಂಕಾಪುರ, ಮಖಬೂಲ ಬಾವಾನವರ, ಹಜರೇಸಾಬ ಮನ್ನಂಗಿ, ಫಕ್ಕೀರಪ್ಪ ಕಾಳಿ ಸೇರಿದಂತೆ ಅನೇಕ ಕಾರ್ಯಕರ್ತರು ಉದಾಸಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಕೆಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ತಾಲೂಕು ಕೆಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ, ಕೆಸಿಸಿ ಬ್ಯಾಂಕ್ ನಿದೇಶಕ ಬಸಣ್ಣ ಸಂಶಿ, ಎಪಿಎಂಸಿ ಉಪಾಧ್ಯಕ್ಷ ಷಣ್ಮೂಖಯ್ಯ ಹಿರೇಮಠ, ಹನುಮಂತಪ್ಪ ತಳವಾರ, ಮಾಲತೇಶ ಸೊಪ್ಪಿನ, ಸಿ.ಎಸ್. ಹುಣಸಿಕಟ್ಟಿ ಇದ್ದರು.