ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಭಿವೃದ್ಧಿ ಗಮನಿಸಿ ಮತ ಹಾಕಿ: ಬೊಮ್ಮಾಯಿ

Rashmi Kasaragodu
Updated On : 20 Apr 2013, 11:11 am

ಶಿಗ್ಗಾಂವಿ: ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಶಿಗ್ಗಾಂವಿಯ ಸಮಗ್ರ ಅಭಿವೃದ್ಧಿಗೆ ಐದು ವರ್ಷಗಳ ಕಾಲ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಅಭಿವೃದ್ಧಿ ಕಾರ್ಯ ನೋಡಿ ಪ್ರಸಕ್ತ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮತದಾರರಲ್ಲಿ ವಿನಂತಿಸಿದರು.
ಶುಕ್ರವಾರ ತಾಲೂಕಿನ ಸದಾಶಿವಪೇಟೆ ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸಿದ ಅವರು, ಕಳೆದ ಬಾರಿ ಮತದಾರರು ಆರ್ಶೀವಾದದಿಂದ ಆಯ್ಕೆಗೊಂಡು ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕವಾಗಿ ಶ್ರಮಿಸಿದ ತೃಪ್ತಿ ತಮಗಿದೆ ಎಂದರು. ಕಾಂಕ್ರಿಟ್ ರಸ್ತೆ ಹಾಗೂ ಕುಡಿಯುವ ನೀರಿನ ಕಾಮಗಾರಿಗೆ ರು. 20 ಲಕ್ಷ ಬಿಡುಗಡೆ ಮಾಡಲಾಗಿದ್ದು ಚುನಾವಣೆಗಳು ಘೋಷಣೆಯಾಗಿದ್ದರಿಂದ ಅಭಿವೃದ್ಧಿ ಕಾರ್ಯಗಳು ಸದ್ಯ ಸ್ಥಗಿತಗೊಂಡಿವೆ ಎಂದ ಬೊಮ್ಮಾಯಿ, ಗ್ರಾಮಸ್ಥರ ಸಮಸ್ಯೆ ಬಗ್ಗೆ ಎಳ್ಳಷ್ಟು ತಲೆಕೆಡಿಸಿಕೊಳ್ಳದ ಕಾಂಗ್ರೆಸ್ಸಿಗರಿಗೆ ಚುನಾವಣೆಯಲ್ಲಿ ಮತ ಕೇಳುವ ನೈತಿಕ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಹಾಲು ಮತ(ಕುರುಬ) ಸಮಾಜದ ಕಂಬಳಿಯನ್ನು ಹೆಗಲು ಮೇಲೆ ಹಾಕಿಕೊಂಡು ಭಿಕ್ಷೆ ಬೇಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ ಖಾದ್ರಿ, ಈ ಸಮಾಜಕ್ಕೆ ಅವಮಾನಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಧೈರ್ಯ, ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹಾಲು ಮತ ಸಮಾಜ ಹೆಸರುವಾಸಿಯಾಗಿದೆ. ಕಂಬಳಿ ಈ ಸಮಾಜದ ಹೆಗ್ಗುರುತು ಆಗಿದೆ ಎಂದರು. ಕುರುಬ ಸಮಾಜವೇ ತಮ್ಮ ಬೆಂಬಲಕ್ಕಿದೆ. ಚುನಾವಣೆ ಸಂದರ್ಭ ಮತಕ್ಕಾಗಿ ಮತ್ತೊಂದು ಸಮಾಜವನ್ನು ಅವಮಾನಿಸುವುದು ಸಂಸ್ಕೃತಿಯಲ್ಲ. ಕ್ಷೇತ್ರದ ಜನತೆ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಾಗಿ ಬೊಮ್ಮಾಯಿ ಭರವಸೆ ನೀಡಿದರು.  ಬಿಜೆಪಿ ತಾಲೂಕಾಧ್ಯಕ್ಷ ದೇವಣ್ಣ ಚಾಕಲಬ್ಬಿ, ಬಸವಣ್ಣೆಪ್ಪ ಗುಳೇದಕೇರಿ, ಕುರಬ ಸಮಾಜದ ಮುಖಂಡ ಎಂ.ಎನ್. ಹೊನಕೇರಿ, ಶಿವಾನಂದ ಬಿಳಿಕುದರಿ, ಚಂದ್ರಪ್ಪ ಕಿವಡನವರ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement