ಕಾಂಗ್ರೆಸ್, ಕೆಜೆಪಿಯಿಂದ ಬಿಜೆಪಿ ಸೇರ್ಪಡೆ
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹಾದಿಮನಿ ತಾಲೂಕಿನ ಹುಣಸಿಕಟ್ಟಿ, ಬೆಳಗಾಲಪೇಟ, ನೆಗವಣಿಗೆ ಹಾಗೂ ಮಹಾರಾಜಪೇಟ ಗ್ರಾಮಗಳಲ್ಲಿ ಸಂಚರಿಸಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಹಾರಾಜಪೇಟದಲ್ಲಿ ಶ್ರೀಕಾಂತ ಅಂಗಡಿ ಹಾಗೂ ಅಮರ ಶೆಟ್ಟರ್ ಅವರ ನೇತೃತ್ವದಲ್ಲಿ 20 ಜನ ಪ್ರಮುಖರು ಕಾಂಗ್ರೆಸ್ ಹಾಗೂ ಕೆಜೆಪಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.
ಮತ ಯಾಚನೆಯ ನಂತರ ಮತದಾರರನ್ನುದ್ದೇಶಿಸಿ ಬಸವರಾಜ ಹಾದಿಮನಿ ಮಾತನಾಡಿ, ನೀರಾವರಿ ಪ್ರದೇಶ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ತಾವು ಆದ್ಯತೆ ನೀಡುವುದಾಗಿ ಹೇಳಿದರು. ರೈತರ ಹೊಲಗಳಿಗೆ ಅಗತ್ಯವಿರುವ ರಸ್ತೆಗಳ ನಿರ್ಮಾಣ ಹಾಗೂ ದೇವಸ್ಥಾನ ಹಾಗೂ ಎಲ್ಲ ಧರ್ಮಗಳ ಪೂಜಾ ಸ್ಥಳಗಳ ಪುನರುಜ್ಜೀವನ ಕಾರ್ಯಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ರೈತರಿಗೆ ಉಚಿತ ವಿದ್ಯುತ್, ಸಣ್ಣ ರೈತರಿಗೆ ಸಹಾಯಧನ, ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹೆಚ್ಚು ಅನುದಾನ ಒದಗಿಸಲಿದೆ. ಕಳೆದ 5 ವರ್ಷಗಳ ಬಿಜೆಪಿ ಸರ್ಕಾರದ ಸಾಧನೆಗಳೇ ನಮ್ಮ ಗೆಲವಿಗೆ ಸಹಕಾರಿಯಾಗಿವೆ ಎಂದು ಹಾದಿಮನಿ ತಿಳಿಸಿದರು. ಸಭೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಜಿ.ಬಿ. ಗುಡ್ಡಪ್ಪನವರ್, ರವಿಕುಮಾರ ಬೆಲ್ಲದ, ವೀರಣ್ಣ ನಿಂಬಣ್ಣನವರ್, ಎಸ್.ಆರ್. ಪಾಟೀಲ ಎಸ್.ಕೆ. ಪೂಜಾರ ಮುಂತಾದವರಿದ್ದರು.