ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿಗೆ ಮತ ಕೇಳಲು ಹಕ್ಕಿಲ್ಲ: ಬಸವರಾಜ

Rashmi Kasaragodu
Updated On : 20 Apr 2013, 11:11 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಏ.19
ತಪ್ಪು ಕೃಷಿ ನೀತಿ ಪ್ರಕಟಿಸಿರುವ ರಾಜ್ಯ ಬಿಜೆಪಿ ಸರ್ಕಾರ, ಕೇಂದ್ರದ ರೈತರ ಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗದ ಬಿಜೆಪಿಗೆ ಮತ ಕೇಳಲು ನೈತಿಕ ಹಕ್ಕಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ ಹೇಳಿದರು.
ಶುಕ್ರವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿಸಿ ನಡೆಸಿ ಕಾಂಗ್ರೆಸ್ಗೆ ಮತ ನೀಡುವಂತೆ ಮನವಿ ಮಾಡಿದರು. ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸುವ ಮೂಲಕ ರೈತರ ಸಮಾಧಿ ಮೇಲೆ ಆಡಳಿತ ನಡೆಸಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದ ಬಿಜೆಪಿ ಮುಖಂಡರು ಘಟನೆ ವಿಪಕ್ಷಗಳ ಕುತಂತ್ರವೆಂದು ಬಣ್ಣಿಸಿದರು. ಈ ಕುರಿತು ತನಿಖೆ ನಡೆಸಿದ ಆಯೋಗದ ಮುಂದೆ ಗೋಲಿಬಾರ್ ಪ್ರಕರಣದಲ್ಲಿ ಮೃತಪಟ್ಟವರು ರೈತರಲ್ಲ ಗೂಂಡಾಗಳೆಂದು ಹೇಳಿಕೆ ನೀಡಿದರು. ಹೀಗೆ ತಮಗೆ ಮನಸ್ಸಿಗೆ ಬಂದ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ಬಿಜೆಪಿ ಮುಖಂಡರು ರಾಜ್ಯದ ಜನರಿಗೆ ಯಾವ ರೀತಿ ಭರವಸೆ ನೀಡಿದ್ದಾರೆ ಎಂಬುದನ್ನು ಯಾರೂ ಹೇಳಬೇಕಾಗಿಲ್ಲ ಎಂದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಚ್ಚಾಟದಲ್ಲೆ ಕಾಲ ಕಳೆದ ಅವರು ರಾಜ್ಯದ ಅಭಿವೃದ್ದಿಗೆ ಗಮನಹರಿಸದೆ ಆಂತರಿಕ ಸಮಸ್ಯೆಗಳಲ್ಲೆ ಹೆಚ್ಚು ಸಮಯ ವ್ಯರ್ಥ ಮಾಡಿದ್ದಾರೆ. ಮೂವರು ಮುಖ್ಯಮಂತ್ರಿಗಳಾದರೆ ನಾಲ್ಕು ಬಾರಿ ಸ್ವಪಕ್ಷೀಯರಿಂದಲೇ ಸರ್ಕಾರವನ್ನು ಉರುಳಿಸುವ ಪ್ರಯತ್ನಗಳು ನಡೆದಿವೆ ಎಂದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಯುಪಿಎ ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಸಾವಿರಾರು ಕೋಟಿ ರು. ಅನುದಾನದ ನೀಡಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕೈಗೊಂಡ ಕಾಮಗಾರಿಗಳನ್ನು ಮತದಾರರು ಮರೆತಿಲ್ಲ. ಹೀಗಾಗಿ ಕಾಂಗ್ರೆಸ್ನ್ನು ಬೆಂಬಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ಮಾತನಾಡಿ, ತಾಲೂಕಿನಲ್ಲಿ ಏಳು ಬಾರಿ ಕಾಂಗ್ರೆಸ್ ಗೆದ್ದಿದೆ. ಈ ಬಾರಿಯು ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಿದೆ. ಬಸವರಾಜ ಶಿವಣ್ಣನವರ ಹೆಚ್ಚು ಮತಗಳ ಅಂತರಗಳಿಂದ ಆಯ್ಕೆಯಾಗಲಿದ್ದಾರೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಪಕ್ಷ ಬಹುತೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದರು.
ಕಾಂಗ್ರೆಸ್ ಘಟಕದ ಅಧ್ಯಕ್ಷ ಹುಸೇನಸಾಬ ದೊಡ್ಡಮನಿ, ಕಾಗಿನೆಲೆ ಬ್ಲಾಕ್ ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ, ಮುಖಂಡರಾದ ದಾನಪ್ಪ ಚೂರಿ, ಎಸ್.ಸಿ. ಶಿಡೆನೂರ, ಲಿಂಗಪ್ಪ ಕೊಂಬಳಿ, ರುದ್ರಪ್ಪ ಹೊಂಕಣ, ಹುಚ್ಚನಗೌಡ ಲಿಂಗನಗೌಡ್ರ, ರಮೇಶ ಸುತ್ತಕೋಟಿ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement