ಶಂಕರಗೆ 5 ಸಾವಿರ ಮತಗಳ ಗೆಲವು
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಏ. 19
ಮೇ 5ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ರಾಣಿಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಆರ್. ಶಂಕರ್ 5 ರಿಂದ 8 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಮಂಜುನಾಥ ಕಂಬಳಿ ತಿಳಿಸಿದರು.
ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇತ್ತೀಚೆಗೆ ಮಾಜಿ ಉಪ ಮೇಯರ ಆರ್. ಶಂಕರ್ ಜೊತೆ ತಹಸೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತಾಲೂಕಿನ ಪ್ರತಿ ಹಳ್ಳಿಯ ಮನೆಗಳಿಗೆ ತಿರುಗಿ ಸಮಸ್ಯೆಗಳನ್ನು ಆಲಿಸಿರುವ ಆರ್. ಶಂಕರ್ ಅವರು ರಾಣಿಬೆನ್ನೂರು ಶಾಸಕರಾಗಲು ಅರ್ಹರಾಗಿದ್ದು, ಈ ವಿಷಯ ತಿಳಿದ ತಕ್ಷಣ, ತಾಲೂಕಿನ ಎಲ್ಲಾ ಗ್ರಾಮ ಹಾಗೂ ನಗರದ ವಿವಿಧ ಬಡಾವಣೆಗಳಿಂದ ಮಹಿಳೆಯರು, ಪುರುಷರು, ವೃದ್ದರಾದಿಯಾಗಿ ತಮ್ಮ ಸ್ವಂತ ಖರ್ಚಿನಿಂದ ಬಂದು ಮೆರವಣಿಗೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿರುವುದನ್ನು ನೋಡಿದರೆ ಆರ್. ಶಂಕರ ಸುಮಾರು 5ರಿಂದ 8 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದರು.
ಇಲ್ಲಿನ ಪಿ.ಬಿ. ರಸ್ತೆಯಲ್ಲಿರುವ ಕೆಇಬಿ ಗಣೇಶ ದೇವಸ್ಧಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ನಾಮಪತ್ರ ಸಲ್ಲಿಸುವುದಕ್ಕಾಗಿ ಹೊರಟ ಮೆರವಣಿಗೆಯಲ್ಲಿ, ತಾಲೂಕಿನ ಅರೇಮಲ್ಲಾಪುರ, ರಾಹುತನಕಟ್ಟ, ಐರಣಿ, ಹಿರೇಬಿದರಿ, ಮೇಡ್ಲೆರಿ, ಚಳಗೇರಿ, ಕರೂರು, ಹುಣಸಿಕಟ್ಟಿ ಹಾಗೂ ನಗರದ ವಿವಿಧ ವಾರ್ಡುಗಳಿಂದ ಆಗಮಿಸಿದ್ದ ಸುಮಾರು 5ರಿಂದ 6 ಸಾವಿರ ಜನ ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದ್ದರು.