13 ಅಭ್ಯರ್ಥಿಗಳು ಕಣದಲ್ಲಿ (ಸುದ್ದಿ ಸಂಕ್ಷೇಪ)
ಬ್ಯಾಡಗಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ. ಶನಿವಾರ ನಾಮಪತ್ರ ವಾಪಸಾತಿಗೆ ಕಡೆಯ ದಿನವಾಗಿದ್ದು, ನಾಲ್ವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ. ಒಟ್ಟು 18 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಂದು ತಿರಸ್ಕೃತವಾಗಿತ್ತು. ಉಳಿದ 17 ಜನರಲ್ಲಿ ಬಸವರಾಜ ಬಳ್ಳಾರಿ, ಮಲ್ಲಿಕಾರ್ಜುನ ಬೇವಿನಮರದ, ಶಂಕರಗೌಡ ಪಾಟೀಲ ಹಾಗೂ ರಾಜೀವ ಶ್ರೀಧರ ಶಿಗ್ಲಿ ನಾಮಪತ್ರ ಹಿಂಪಡೆದಿದ್ದಾರೆ. ಕಣದಲ್ಲಿ ಇರುವವರು: ಶಿವರಾಜ ಸಜ್ಜನರ (ಕೆಜೆಪಿ), ಬಸವರಾಜ ನೀಲಪ್ಪ ಶಿವಣ್ಣನವರ (ಕಾಂಗ್ರೆಸ್) ವಿರೂಪಾಕ್ಷಪ್ಪ ಬಳ್ಳಾರಿ (ಬಿಜೆಪಿ), ಚಂದ್ರಪ್ಪ ಕಾರಗಿ (ಜೆಡಿಎಸ್), ಬಸವಂತಪ್ಪ ಹುಲ್ಲತ್ತಿ (ಎಸ್ಜೆಪಿ), ಬಸವಂತಪ್ಪ ಗೋಣೆಮ್ಮನವರ (ಬಿಎಸ್ಪಿ) ದಾದಾಪೀರ್ ಭೂಸಿ (ಬಿಎಸ್ಸಾರ್ ಕಾಂಗ್ರೆಸ್), ಶಿವಬಸಪ್ಪ ಚನ್ನಬಸಪ್ಪ ಬಾಗಣ್ಣನವರ, ರುದ್ರಯ್ಯ ಸಾಲಿಮಠ, ದೇವಪ್ಪ ರಾಮಪ್ಪ ಹುಳಕೆಲ್ಲಪ್ಪನವರ, ಹಾಲಪ್ಪ ತಿಮ್ಮೇನಹಳ್ಳಿ, ಶಿವಕುಮಾರ ಮಹದೇವಪ್ಪ ಚಾಕರಿ ಉಫ್ ತಳವಾರ ಹಾಗೂ ಬಿ.ಎಂ.ಜಯದೇವ ಮಠದ (ಪಕ್ಷೇತರ).
22ರಂದು ಗಣಾರಾಧಣೆ
ಹಿರೇಕೆರೂರು: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ 12 ವರ್ಷಗಳ ನಂತರ ಜರುಗುತ್ತಿರುವ ನವ ಗ್ರಾಮಗಳ ಹಾಗೂ ಶ್ರೀ ದಿಗ್ಗಿ ಮಲ್ಲಿಕಾರ್ಜುನ ದೇವರ ಕುಂಭಾಭಿಷೇಕ ಹಾಗೂ ಗಣಾರಾಧಣೆ ಮಹೋತ್ಸವ ಏ. 22ರಂದು ವಿಜೃಂಭಣೆಯಿಂದ ಜರುಗಲಿದೆ. ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ದಿಗ್ಗಿ ಮಲ್ಲಿಕಾರ್ಜುನ ದೇವರಿಗೆ 108 ಕುಂಭಾಭಿಷೇಕ ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಕಲ ವಾದ್ಯಗಳೊಂದಿಗೆ ಗ್ರಾಮದಲ್ಲಿ ಎಲ್ಲ ನವ ಗ್ರಾಮಗಳ ದೇವರ ಅದ್ದೂರಿ ಮೆರವಣಿಗೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.