ಕೆಜೆಪಿಯಿಂದ ಸಾಮಾಜಿಕ ನ್ಯಾಯ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 20
ಕೆಜೆಪಿ ಉದಯ ಕರ್ನಾಟಕದಲ್ಲಿ ರಾಜಕೀಯವಾಗಿ ಹೊಸ ಆಶಾವಾದ ಮೂಡಿಸಿದ್ದು, ಉಳಿದೆಲ್ಲ ಪಕ್ಷಗಳ ಕಾರ್ಯಕರ್ತರು ಕೆಜೆಪಿ ಸೇರುವ ಮೂಲಕ ಸಾಮಾಜಿಕ ನ್ಯಾಯ ಒದಗಿಸುವ ಸರಕಾರಕ್ಕೆ ಬೆಂಬಲಿಸಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಹಾನಗಲ್ಲಿನಲ್ಲಿ ವಿವಿಧ ಪಕ್ಷಗಳಿಂದ ಕೆಜೆಪಿ ಸೇರಿದ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಾನಗಲ್ಲ ತಾಲೂಕಿನಲ್ಲಿ ಕಳೆದ ಎರಡು ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ನಡೆಸಿದ ಅಭಿವೃದ್ಧಿ ಕಾರ್ಯಗಳು ಮತದಾರರನ್ನು ತೃಪ್ತಿಗೊಳಿಸಿವೆ. ಇಡೀ ತಾಲೂಕಿನಲ್ಲಿ ಎಲ್ಲ ಸಮುದಾಯದ ಎಲ್ಲ ಪಕ್ಷಗಳು ಬಹುಪಾಲು ನಾಯಕರು, ಕಾರ್ಯಕರ್ತರು ಕೆಜೆಪಿಯತ್ತ ಮುಖ ಮಾಡಿದ್ದಾರೆ ಎಂದರು.
ಕಳೆದೆರಡು ದಿನಗಳಿಂದ ನಿರೀಕ್ಷೆಗೂ ಮೀರಿ ಬೇರೆ ಪಕ್ಷಗಳ ನಾಯಕರು ಕೆಜೆಪಿಗೆ ಆಗಮಿಸುತ್ತಿರುವುದು ಸ್ವಾಗತಾರ್ಹ ಸಂಗತಿ. ಇದು ಬಿ.ಎಸ್. ಯಡಿಯೂರಪ್ಪ ಅವರ ಅಭಿವೃದ್ಧಿಯ ಪರಿಣಾಮ. ಹಾನಗಲ್ಲ ತಾಲೂಕಿನಲ್ಲಿ ಹಿಂದೆಂದೂ ಕಾಣ ಅಭಿವೃದ್ಧಿ ತಮ್ಮ ಅವಧಿಯಲ್ಲಾಗಿದೆ ಎಂದು ಸಿ.ಎಂ. ಉದಾಸಿ ತಿಳಿಸಿದರು.
ಹಾನಗಲ್ಲ ತಾಲೂಕಿನ ಮಾಸನಕಟ್ಟೆಯಲ್ಲಿ ಕೆಜೆಪಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಸ್.ಕೆ. ಪೀರಜಾದೆ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಿ.ಐ. ಕಿತ್ತೂರ ನೇತೃತ್ವದಲ್ಲಿ 40ಕ್ಕೂ ಅಧಿಕ ಇತರ ಪಕ್ಷಗಳ ಅಲ್ಪಸಂಖ್ಯಾತ ಸಮುದಾಯದ ನಾಯಕರು ಕೆಜೆಪಿ ಸೇರಿದರು.
ನರೇಗಲ್ಲ ಗ್ರಾಮದಲ್ಲಿ ಸಿದ್ದರಾಮಗೌಡ ಪಾಟೀಲ ಹಾಗೂ ಪ್ರಭು ಶಂಕ್ರಿಕೊಪ್ಪ ಅವರ ನೇತೃತ್ವದಲ್ಲಿ ಚಂದ್ರು ನಾಯಕರ ಸೇರಿದಂತೆ 15 ಜನ ಕೆಜೆಪಿ ಸೇರಿದರು. ಕೂಸನೂರ ಗ್ರಾಮದ ಹುನುಮಂತಪ್ಪ ತುಮರಿಕೊಪ್ಪ ಅವರ ನೇತೃತ್ವದಲ್ಲಿ ಬಾಬುಸಾಬ ಶೇಖಸನದಿ, ಖಲೀಲಸಾಬ್ ಕಂಬಳಿ, ಮಖಬೂಲಸಾಬ ನಾಸಿಪುಡಿ, ಅಲ್ಲಭಕ್ಷ ಕಚವಿ ಮುಂತಾದವರು ಕೆಜೆಪಿ ಸೇರಿದರು.
ಹಾನಗಲ್ಲಿನ ಹೊಸಪೇಟೆ ಓಣಿಯಲ್ಲಿ ಮಹಮ್ಮದ್ ಗೌಸ್ ನಾಸಿಪುಡಿ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಜನ ಕೆಜೆಪಿ ಸೇರಿದರು. ನೂರಾನಿ ಗಲ್ಲಿಯಲ್ಲಿ ಆರೀಫ್ ಅಹಮ್ಮದ್ ಗಿರಿಸಿನಕೊಪ್ಪ ನೇತೃದಲ್ಲಿ 11 ಜನ ಕೆಜೆಪಿ ಸೇರಿದ್ದಾರೆ.
ಎಲ್ಲ ಗ್ರಾಮಗಳಲ್ಲಿ ಪ್ರತಿನಿತ್ಯ ನೂರಾರು ಕಾರ್ಯಕರ್ತರು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಅರಿತು ಕೆಜೆಪಿಯತ್ತ ಧಾವಿಸುತ್ತಿದ್ದಾರೆ ಎಂದು ಸಿ.ಎಂ. ಉದಾಸಿ ತಿಳಿಸಿದರು.