ಕೆರೆಗಳಿಗೆ 0.9 ಟಿಎಂಸಿ ನೀರು: ಬೊಮ್ಮಾಯಿ
ಶಿಗ್ಗಾಂವಿ: ಕುಂದೂರು ಗ್ರಾಮದ ಅಕ್ಕಪಕ್ಕದ ಕೆರೆಗಳಿಗೆ 0.9 ಟಿಎಂಸಿ ನೀರು ಹರಿಸುವ ಮೂಲಕ ಹೆಚ್ಚುವರಿ ಪ್ರದೇಶವನ್ನು ನೀರಾವರಿಗೊಳಪಡಿಸುವ ಮಹತ್ವಾಕಾಂಕ್ಷೆ ತಮ್ಮದಾಗಿದೆ ಎಂದು ಬಿಜೆಪಿ ಅಭ್ಯರ್ಥಿ, ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಗ್ರಾಮದಲ್ಲಿ ಚುನಾವಣೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮತದಾರರನ್ನುದ್ದೇಶಿಸಿ ಅವರು ಮಾತನಾಡಿದರು.
ಶಿಗ್ಗಾಂವಿ ಏತ ನೀರಾವರಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಈ ಗ್ರಾಮಕ್ಕೆ ಪ್ರಯೋಜನವಾಗಿಲ್ಲ. ಆದಾಗ್ಯೂ ಗ್ರಾಮದ ಹರಿಜನ ಕೆರೆ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ತೃಪ್ತಿ ತಮಗಿದೆ ಎಂದರು. ಗ್ರಾಮದ ಪಕ್ಕದಲ್ಲಿ ರು. 8 ಕೋಟಿ ವೆಚ್ಚದಲ್ಲಿ ತಾಂತ್ರಿಕ ಕಾಲೇಜು ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಕುಂದೂರ, ಜಾಲಿಕಟ್ಟಿ, ಕುಂದೂರ-ಗುಡ್ಡದ ಚನ್ನಾಪುರ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ 5 ವರ್ಷದ ಅಧಿಕಾರವಧಿಯಲ್ಲಿ 50 ವರ್ಷದಲ್ಲಿ ಆಗದಿರುವ ಕೆಲಸ, ಕಾರ್ಯಗಳನ್ನು ನಿರ್ವಹಿಸಿದ್ದೇನೆ ಎಂದೂ ಬೊಮ್ಮಾಯಿ ಹೇಳಿಕೊಂಡರು. ಕಳೆದ ಬಾರಿ ಚುನಾವಣೆಯಲ್ಲಿ ಇಡೀ ಗ್ರಾಮವೇ ತಮ್ಮ ಬೆಂಬಲಕ್ಕೆ ನಿಂತುಕೊಂಡಿತ್ತು ಎಂದು ಸ್ಮರಿಸಿದ ಅವರು, ಪ್ರಸಕ್ತ ಚುನಾವಣೆಯಲ್ಲಿಯೂ ಇಲ್ಲಿನ ಪ್ರಜ್ಞಾವಂತ ಮತದಾರ ತಮಗೆ ಅಭೂತಪೂರ್ವ ಗೆಲವು ತಂದುಕೊಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.