ಗೌಡರ ಸೂಚನೆಯಂತೆ ನಾಮಪತ್ರ ವಾಪಸ್
ಬ್ಯಾಡಗಿ: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ತಾವು ನಾಮಪತ್ರ ವಾಪಸ್ ಪಡೆದಿದ್ದಾಗಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಬೇವಿನಮರದ ಹೇಳಿದ್ದಾರೆ. ಶನಿವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಹಿತದೃಷ್ಟಿಯಿಂದ ಈ ಬಾರಿ ಸ್ಪರ್ಧಿಸುತ್ತಿಲ್ಲ. ಆದರೆ, ಬಸವರಾಜ ಹೊರಟ್ಟಿ ಅವರ ಕುತಂತ್ರದಿಂದ ತಮಗೆ ಟಿಕೆಟ್ ತಪ್ಪಿದೆ ಎಂದು ಆರೋಪಿಸಿದರು. ಹೊರಟ್ಟಿ ಸ್ವಾರ್ಥಕ್ಕಾಗಿ ಜೆಡಿಎಸ್ ಪಕ್ಷವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಉಸ್ತುವಾರಿ ವಹಿಸಿಕೊಂಡಲ್ಲಿಂದ ಜಿಲ್ಲೆಯಲ್ಲಿ ಜೆಡಿಎಸ್ ನೆಲಕಚ್ಚಿದೆ. ಒಗ್ಗಟ್ಟಾಗಿದ್ದ ಮುಖಂಡರು ಬೇರಾಗಿದ್ದಾರೆ. ಇಷ್ಟು ದಿನಗಳ ಕಾಲ ಪಕ್ಷಕ್ಕಾಗಿ ಹಣ ಹಾಗೂ ಸಮಯ ವ್ಯಯಿಸಿದ್ದ ತಮಗೆ ಕ್ಷೇತ್ರಾದ್ಯಂತ ಅನುಕೂಲಕರ ವಾತಾವರಣ ಇತ್ತು. ಗೆಲ್ಲುವ ಅವಕಾಶ ಉಜ್ವಲವಾಗಿತ್ತು. ಈ ಬಾರಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ವಿಧಾನಸೌಧಕ್ಕೆ ಹೋಗುತ್ತಿಲ್ಲ ಎಂದಾದರೆ ಅದಕ್ಕೆ ಹೊರಟ್ಟಿಯವರೇ ಕಾರಣ ಎಂದು ಹೇಳಿದರು.