ಜೆಡಿಎಸ್‌ನಿಂದ ಜನಪರ ಕೆಲಸ: ಸಣ್ಣಗೌಡ್ರ
ರಾಣಿಬೆನ್ನೂರು: ಜೆಡಿಎಸ್ ರಾಜ್ಯದ ದಲಿತರ, ಅಲ್ಪಸಂಖ್ಯಾತರ, ರೈತರ ಹಾಗೂ ಎಲ್ಲ ವರ್ಗದ ಕಾರ್ಮಿಕರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಜನಪರ ಕೆಲಸಗಳೇ ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಗೆಲುವಿಗೆ ಸಹಕಾರಿ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ಸಿ. ಸಣ್ಣಗೌಡ್ರ ಹೇಳಿದರು.
ಶುಕ್ರವಾರ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಜೆಡಿಎಸ್ ಪಕ್ಷದಲ್ಲಿದ್ದ ಮುಖಂಡರೆಲ್ಲ ಬೇರೆ ಬೇರೆ ಪಕ್ಷಕ್ಕೆ ವಲಸೆ ಹೋಗಿರುವ ಕಾರಣ, ತಾಲೂಕಿನಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ಉಂಟಾಗಿತ್ತು. ಪಕ್ಷವನ್ನು ಬಿಟ್ಟಿದ್ದ ನಾಯಕರು ಮತ್ತು ಜೆಡಿಎಸ್ ಅಭಿಮಾನಿಗಳು ಮರಳಿ ಪಕ್ಷಕ್ಕೆ ಬಂದಿದ್ದರಿಂದ ಜೆಡಿಎಸ್ ಪಕ್ಷದಲ್ಲಿ ಹೊಸತನ ಮೂಡಿದೆ ಎಂದು ಸಣ್ಣಗೌಡ್ರ ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ನಗರಸಭೆಯ ಸದಸ್ಯನಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನನಗೆ ಗೆಲವು ನಿಶ್ಚಿತವೆಂದು ಹೇಳಿದರು.
ಜಿಲ್ಲಾ ಜೆಡಿಎಸ್ ಮುಖಂಡ ನಿವೃತ್ತ ಡಿವೈಎಸ್ಪಿ ಬಿ.ಬಿ. ಸಕ್ರಿ, ಮಹಿಳಾ ಮುಖಂಡರಾದ ಚನ್ನಮ್ಮ ಗುರುಪಾದದೇವರಮಠ, ರವಿಕುಮಾರ ಭತ್ತದ, ಮನವರುದ್ದಿನ ಕಮದೋಡ, ಆರ್.ಜಿ. ಬಾಲರಾಜ, ಈ ರಾಜಶೇಖರ, ಸಿ.ಎಸ್. ಸಪ್ಪಣ್ಣನವರ ಇದ್ದರು. ಇದೇ ವೇಳೆ ತಾಲೂಕಿನ ಮಾಕನೂರು, ಚಳಗೇರಿ, ಕಮದೋಡ, ಕರೂರು, ಹಿರೇಬಿದರಿ ಹಾಗೂ ಹಲಗೇರಿಯ ನೂರಾರು ಜನರು ಕೆಜೆಪಿ ತೊರೆದು ಜೆಡಿಎಸ್ ಸೇರಿದರು.