ಬಿಜೆಪಿ ಮುಳುಗುತ್ತಿರುವ ಹಡಗು
ಬ್ಯಾಡಗಿ: ಬಿಜೆಪಿ ಮುಳುಗುತ್ತಿರುವ ಹಡಗು ಅದನ್ನು ಯಾರೂ ಹತ್ತಲು ಸಿದ್ಧರಿಲ್ಲ, ಹಗಲು ತೋಡಿದ ಹಳ್ಳಕ್ಕೆ ರಾತ್ರಿ ಬೀಳುವಷ್ಟು ಮತದಾರರು ಮೂರ್ಖರಲ್ಲ. ಕೆಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಿದರು.
ಶನಿವಾರ ಪಟ್ಟಣದಲ್ಲಿ ಕರ್ನಾಟಕ ಜನತಾ ಪಕ್ಷ ಆಯೋಜಿಸಿದ್ದ ಮತ ಯಾಚನೆ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದ ಅವರು, ಬಿಎಸ್ವೈ ಇಲ್ಲದ ಬಿಜೆಪಿಗೆ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. ಮೇ 8ರಂದು ಬರುವ ಫಲಿತಾಂಶ ರಾಜ್ಯದಲ್ಲಿ ಅಭಿವೃದ್ಧಿಗೆ ಹೊಸ ಆಯಾಮ ಸಿಗಲಿದೆ ಎಂದರು.
ಜನ ಕೆಜೆಪಿ ಕೈಬಿಡಲ್ಲ, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ. ಹಾವೇರಿ ವಿಧಾನಸಭೆಯ 6 ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದರು.
ಕೆಜೆಪಿ ತಾಲೂಕಾಧ್ಯಕ್ಷ ಮುರಿಗೆಪ್ಪ ಶೆಟ್ಟರ, ಎಪಿಎಂಸಿ ಅಧ್ಯಕ್ಷ ರವೀಂದ್ರ ಶೆಟ್ಟರ, ಪುರಸಭೆ ಸದಸ್ಯ ಬಿ.ಎಂ. ಛತ್ರದ, ಶಹರ ಘಟಕದ ಅಧ್ಯಕ್ಷ ಗಂಗಣ್ಣ ಎಲಿ, ರಾಜು ಸಜ್ಜನ, ಗಣೇಶ್ ಅಚಲಕರ, ನಾಗಪ್ಪ ಉಜನಿ ಹಾಗೂ ಇನ್ನಿತರರು ಇದ್ದರು.