ಮಾದರಿ ಕ್ಷೇತ್ರವಾಗಿಸುವೆ
ಸವಣೂರು: ಶಿಗ್ಗಾಂವಿ ಮತಕ್ಷೇತ್ರದಲ್ಲಿ 5 ವರ್ಷಗಳಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಮೀರಿಸುವಂತೆ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸಲು ಪ್ರಯತ್ನಿಸುವುದಾಗಿ ಬಿಜೆಪಿ ಅಭ್ಯರ್ಥಿ, ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಬಸವನಾಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಬಳಿಕ ಮತದಾರರನ್ನುದ್ದೇಶಿಸಿ ಮಾತನಾಡಿದರು. ಮಮದಾಪುರ ಕೆರೆಗೆ ವರದಾ ನದಿ ನೀರು ಹರಿಸುವ ಮೂಲಕ ಅಕ್ಕಪಕ್ಕದ 40 ಎಕರೆ ಕೃಷಿಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ರು. 700 ಕೋಟಿಯ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮಕೈಗೊಂಡಿರುವುದಾಗಿ ಬೊಮ್ಮಾಯಿ ತಿಳಿಸಿದರು. ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ತಾಲೂಕನ್ನು ಅಭಿವೃದ್ಧಿಪಡಿಸಿದ್ದೇ ಬಿಜೆಪಿ ಸರ್ಕಾರ. ತಾಲೂಕಾದ್ಯಂತ ಎಂದೂ ಕಂಡರಿಯದ ರೀತಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ತಾಲೂಕಿನ 22 ಹಳ್ಳಿಗಳು ಕುಂದಗೋಳ ಮತಕ್ಷೇತ್ರಕ್ಕೆ ಹೋಗಿದ್ದರಿಂದ ಈ ಹಳ್ಳಿಗಳು ನಿರ್ಲಕ್ಷ್ಯಕ್ಕೊಳಗಾಗಿದ್ದವು. ಆದ್ದರಿಂದ ಬರುವ ದಿನಗಳಲ್ಲಿ ಈ ಹಳ್ಳಿಗಳಲ್ಲಿ ಮೂಲಸೌಲಭ್ಯ ಒದಗಿಸಿಕೊಡುವುದಕ್ಕೆ ಆದ್ಯತೆ ನೀಡಲಾಗುವುದೆಂದರು. ಜಿಪಂ ಸದಸ್ಯ ಬಿ.ಟಿ. ಇನಾಮತಿ, ಸಿ.ಎಸ್. ಪಾಟೀಲ, ತಾಪಂ ಉಪಾಧ್ಯಕ್ಷೆ ಸುಗಂಧಾಬಾಯಿ ಘೋಡಕೆ, ನಿಂಗಣ್ಣ ಜವಳಿ, ವೀರನಗೌಡ ಪಾಟೀಲ, ತಿಪ್ಪಣ್ಣ ಸಾತಣ್ಣವರ, ನಿಂಗಪ್ಪ ಹರಿಜನ, ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಎಸ್.ಕೆ. ಅಕ್ಕಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರವಿ ಕುಡವಕ್ಕಲಿಗರ ಮತ್ತಿತರರು ಪಾಲ್ಗೊಂಡಿದ್ದರು.