ಬಾಗೂರ ಕೈ ಸೇರಿದ್ದು ವೈಯಕ್ತಿಕ ನಿರ್ಧಾರ
ಶಿಗ್ಗಾಂವಿ: ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಾನಂದ ಬಾಗೂರ ಕಾಂಗ್ರೆಸ್ ಸೇರಿರುವುದು ಅವರ ವೈಯಕ್ತಿಕ ನಿರ್ಣಯವೇ ಹೊರತು ಸಮಾಜದ್ದಲ್ಲ ಎಂದು ಪಂಚಮಸಾಲಿ ಸಮಾಜದ ಸಭೆ ಸ್ಪಷ್ಟಪಡಿಸಿದೆ. ಪಟ್ಟಣದಲ್ಲಿ ಶಂಕರಗೌಡ್ರ ಪಾಟೀಲರ ಮನೆಯಲ್ಲಿ, ಅವರದೇ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಮಸಾಲಿ ಸಮಾಜದ ಕಾರ್ಯಕಾರಿ ಮಂಡಳಿ ಈ ಸ್ಪಷ್ಟನೆ ನೀಡಿದೆ. ಸಮಾಜದ ಅಧ್ಯಕ್ಷರಾಗಿ ಬಾಗೂರ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಸಮಾಜದ ಅಧ್ಯಕ್ಷರು ಎಂಬ ಹೆಸರಿನಲ್ಲಿ ಕಾಂಗ್ರೆಸ್ ಸೇರಿದ ಸಂಗತಿಯನ್ನು ಸಮಾಜ ಖಂಡಿಸುತ್ತದೆ. ಸಂಘಟನೆಯಲ್ಲಿ ರಾಜಕೀಯ ಬಣ್ಣ ಸರಿಯಲ್ಲ ಎಂದು ಮುಖಂಡರು ಅಭಿಪ್ರಾಯಪಟ್ಟರು. ಸ್ವಾರ್ಥ ಮನೋಭಾವದವರು ಸಮಾಜದ ಜವಾಬ್ದಾರಿ ವಹಿಸಿಕೊಳ್ಳಬಾರದು. ಒಬ್ಬ ವ್ಯಕ್ತಿಯ ಕೈಯಲಿ ಸಮಾಜವಿಲ್ಲ. ಶಿವಾನಂದ ಬಾಗೂರ ಕಾಂಗ್ರೆಸ್ ಸೇರಿದ ತಕ್ಷಣ ಸಮಾಜವೇ ಅವರ ಹಿಂದೆ ಹೋಗಲ್ಲ. ಅವರ ವೈಯಕ್ತಿಕ ನಿಲುವನ್ನು ಸಮಾಜ ಪ್ರಶ್ನಿಸುವುದಿಲ್ಲ ಎಂದರು. ಮುಖಂಡರಾದ ಎಚ್.ಆರ್. ದುಂಡಿಗೌಡ್ರ, ಬ.ಪ. ಯಲಿಗಾರ, ಶಿದ್ಲಿಂಗಪ್ಪ ಕಾರಡಗಿ, ಎಸ್.ಕೆ. ಅಕ್ಕಿ, ಗಂಗಾಧರ ಸಾತಣ್ಣನವರ, ಸಿ.ಎಸ್. ಮತ್ತಿಗಟ್ಟಿ, ಪುರಸಭೆ ಸದಸ್ಯ ಭರಮ್ಮಜ್ಜ ನವಲಗುಂದ, ಬಸವರಾಜ ವಿಜಾಪುರ, ವಿರೂಪಾಕ್ಷಪ್ಪ ಬಿಜಾಪುರ, ವೀರೇಶ ಆಜೂರ, ಸಣ್ಣಪ್ಪ ಬುಳ್ಳಕ್ಕನವರ, ಎಸ್.ಎಸ್. ಬಿಂಗಾಪುರ ಉಪಸ್ಥಿತರಿದ್ದರು. ಬಸವರಾಜ ಗೊಬ್ಬಿ ಸ್ವಾಗತಿಸಿದರು. ಎಂ.ಬಿ. ಹಳೆಮನೆ ಕಾರ್ಯಕ್ರಮ ನಿರೂಪಿಸಿದರು.