ಪಕ್ಷಾಂತರಿ, ಹೊಸಬರಿಗೆ ಮಣೆ: ಬಂಡಾಯ ಭೀತಿ
ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಬಹುತೇಕರು 'ಪಕ್ಷಾಂತರಿ ಹಾಗೂ ಹೊಸಬರು' ಆಗಿರುವುದು ಮುಖಂಡರು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕೆರಳುವಂತೆ ಮಾಡಿದೆ.
ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮ ಮನದಲ್ಲಿ ಮಡುಗಟ್ಟಿದ್ದ ಆಕ್ರೋಶ ಹೊರಗೆಡುವುತ್ತಿರುವುದು ಈ ಪಕ್ಷದ ಹಿರಿಯ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ಪಕ್ಷದಲ್ಲಿ ಕಂಡು ಬರುತ್ತಿರುವ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮತದಾರ, ಬಿಜೆಪಿ, ಕಾಂಗ್ರೆಸ್ ಹಾಗೂ ಕೆಜೆಪಿ ನಡುವಿನ ಗುದ್ದಾಟದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂಬ ಹವಣಿಕೆಯಲ್ಲಿದ್ದ ಜೆಡಿಎಸ್ನ ಉದ್ದೇಶಕ್ಕೆ ತಣ್ಣೀರೆರಚಿದಂತಾಗಿದೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ಬಂಡಾಯ ಅಭ್ಯರ್ಥಿಯಾಗಿ: ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹಿರೇಕೆರೂರು, ಶಿಗ್ಗಾಂವಿ ಹಾಗೂ ಹಾನಗಲ್ಲಿನಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸಿದ ಅನೇಕ ಹಿರಿಯ ಮುಖಂಡರಿಗೆ ಪ್ರಸಕ್ತ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದೇ ಪಕ್ಷದಲ್ಲಿ ಬಂಡಾಯದ ಕಿಡಿ ಹೊತ್ತಿಕೊಳ್ಳುವಂತಾಗಿದೆ. ಜೆಡಿಎಸ್ನ ಹಿರಿಯ ಮುಖಂಡ ಬಿ.ಎಚ್. ಬನ್ನಿಕೋಡ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದರೆ ಹಾವೇರಿ ಮೀಸಲು ವಿಧಾನಸಭೆ ಕ್ಷೇತ್ರದಿಂದ ಮತ್ತೊಬ್ಬ ಮುಖಂಡ ಶ್ರೀಪಾದ ಬೆಟಗೇರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಪಕ್ಷಾಂತರಿಗಳಿಗೆ ಟಿಕೆಟ್!: ಹಾವೇರಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿರುವ ಪರಮೇಶ್ವರಪ್ಪ ಮೇಗಳಮನಿ, ಮೂಲತಃ ಕಾಂಗ್ರೆಸ್ಸಿಗರಾಗಿದ್ದ ಇವರು ಇತ್ತೀಚಿಗಷ್ಟೇ ಜೆಡಿಎಸ್ಗೆ ಸೇರ್ಪಡೆಯಾಗಿದ್ದರು. ಬ್ಯಾಡಗಿ ಕ್ಷೇತ್ರದಿಂದ ಸ್ಪರ್ಧಿಸಿರುವ ವಕೀಲ ಚಂದ್ರು ಖಾರಗಿ ರಾಜಕೀಯಕ್ಕೆ ಹೊಸಬರು. ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಗೌಡಶಿವಣ್ಣವರ ಅವರಿಗೆ ರಾಣಿಬೆನ್ನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಶಿಗ್ಗಾವಿ ಮತಕ್ಷೇತ್ರದಿಂದ ಸುಮಂಗಲಾ ಮೈಸೂರು ಹಾಗೂ ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಮೋಹನಕುಮಾರ ರಾಜಕಾರಣಕ್ಕೆ ಹೊಸಬರು. ಹಿರೇಕೆರೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಡಿ.ಎಂ. ಸಾಲಿ ಒಬ್ಬರೇ ಜೆಡಿಎಸ್ನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಷ್ಠಾವಂತರ ಕಡೆಗಣನೆ: ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ನೂರಾರು ಕಾರ್ಯಕರ್ತರು ಪಕ್ಷದಲ್ಲಿದ್ದಾಗಲೂ ಹಿರಿಯ ನಾಯಕರು ಅವರೆಲ್ಲರನ್ನೂ ಕಡೆಗಣಿಸಿ ಹೊಸಬರು ಹಾಗೂ ಅನ್ಯ ಪಕ್ಷಗಳಿಂದ ಇತ್ತೀಚಿಗಷ್ಟೇ ಜೆಡಿಎಸ್ಗೆ ಸೇರ್ಪಡೆಗೊಂಡವರಿಗೆ ಟಿಕೆಟ್ ನೀಡುವ ಮೂಲಕ ನಿಷ್ಠಾವಂತ ಕಾರ್ಯಕರ್ತ ಸಿಡಿದೇಳಬಹುದೆಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತಿವೆ.
ಹಿರಿಯರಿಗೆ ಕಮ್ಮಿಯಿಲ್ಲ: ರಾಣಿಬೆನ್ನೂರು ಕ್ಷೇತ್ರದಲ್ಲಿ ಪಕ್ಷ ಬಲಪಡಿಸಲು ಕೆಎಂಪಿ ಮಣಿ, ಸಿ.ಸಿ. ಚನ್ನಗೌಡ್ರ, ಮತ್ತಿತರರು ಹಗಲಿರುಳು ಶ್ರಮಿಸಿದ್ದಾರೆ. ಇದೇ ರೀತಿ ಬ್ಯಾಡಗಿ ಕ್ಷೇತ್ರದಲ್ಲಿ ಎಸ್.ಆರ್. ಪಾಟೀಲ, ಮಲ್ಲಿಕಾರ್ಜುನ ಬೇವಿನಮರದ, ಮೋಹನ ಬಿನ್ನಾಳ ಮತ್ತಿತರರಿದ್ದಾರೆ. ಹಾವೇರಿಯಲ್ಲಿ ಪಕ್ಷ ಸಂಘಟನೆಗೆ ತನ್ನದೇ ಆದ ಕೊಡುಗೆ ನೀಡಿರುವ ಬಿ.ಎಸ್. ಮಳಗಿ ಅವರನ್ನು ಟಿಕೆಟ್ ನೀಡದೇ ಮೇಗಳಮನಿಗೆ ಮಣೆ ಹಾಕಲಾಗಿದೆ. ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ ಅತ್ಯಂತ ಹಿರಿಯರಾಗಿರುವ ಬಿ.ಎಸ್. ಬನ್ನಿಕೋಡ ಅವರನ್ನು ಕಡೆಗಣಿಸಿದ್ದರೆ, ಶಿಗ್ಗಾಂವಿ ಮತಕ್ಷೇತ್ರದಲ್ಲಿ ಪ್ರೇಮಾ ಪಾಟೀಲ, ಎ.ಎಚ್. ಪಠಾಣ ಹಾಗೂ ಎಂ.ಎಚ್. ಬೆಂಡಿಗೇರಿ ಅವರನ್ನು ಕಡೆಗಣಿಸಲಾಗಿದ್ದು, ಹಾನಗಲ್ ಮತಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ ಎಂದು ಕಾರ್ಯಕರ್ತರೇ ಆಡಿಕೊಳ್ಳುತ್ತಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಿ ಜೆಡಿಎಸ್ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಜಿಲ್ಲಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪಕ್ಷದಲ್ಲಿ ಕಂಡುಬರುತ್ತಿರುವ ಈ ಗೊಂದಲ ಶಮನ ಮಾಡಲು ಹಿರಿಯ ನಾಯಕರು ಶೀಘ್ರ ಪ್ರಯತ್ನಿಸದಿದ್ದಲ್ಲಿ ಇದರ ನೇರ ಪರಿಣಾಮ ಚುನಾವಣೆ ಫಲಿತಾಂಶದ ಮೇಲೆ ಆಗಲಿದೆ ಎಂಬುದು ಪ್ರಸ್ತುತ ರಾಜಕೀಯ ಚಿಂತನೆ.