ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮಾದರಿ ಚುನಾವಣೆಗೆ ಸಕಲ ಸಿದ್ಧತೆ

Rashmi Kasaragodu
Updated On : 23 Apr 2013, 10:44 am

 ಹಾವೇರಿ:  ಮೇ 5ರಂದು ಜರುಗಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಚುನಾವಣಾ ಪೂರ್ವಸಿದ್ಧತೆಗಳ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು.
ಚುನಾವಣೆ ಜರುಗಲು ಎರಡು ವಾರಗಳ ಅವಧಿ ಬಾಕಿ ಇದ್ದು, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಡಳಿತ ಯಂತ್ರ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಾದರಿ ನೀತಿ ಸಂಹಿತೆ ಅನುಷ್ಠಾನ, ಅಂಚೆ ಮತ ಪತ್ರ ರವಾನೆ, ಚುನಾವಣಾ ಕಾರ್ಯಕ್ಕಾಗಿ ನೆರವು ಕೇಂದ್ರಗಳ ಸ್ಥಾಪನೆ, ವೀಕ್ಷಕರ ನೇಮಕ, ಚುನಾವಣಾ ಸಿಬ್ಬಂದಿ ತರಬೇತಿ, ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರಗಳ ನಿರ್ಧಾರ ಹಾಗೂ ಮತ ಎಣಿಕೆ ಕೇಂದ್ರದ ಪೂರ್ವ ಸಿದ್ಧತೆಗಳು ನಿರೀಕ್ಷೆಯಂತೆ ಪ್ರಗತಿಯಲ್ಲಿವೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಚುನಾವಣೆಯ ಮೇಲೆ ನಿಗಾ ಇರಿಸಲು ನಾಲ್ವರು ವೆಚ್ಚ ವೀಕ್ಷಕರು (ಅನಿಲ ಡಾಕಾ, ಡಾ೤ ವೇದಾಂಶು ತ್ರಿಪಾಠಿ, ಅಭಿನವ ಪಾಂಚೋಲಿ ಮತ್ತು ರಿಷಿ ಗೋಯಲ್ ಮತ್ತು ನಾಲ್ವರು ಸಾಮಾನ್ಯ ವೀಕ್ಷಕರು (ಅನುರಾಗ ಚೌಧರಿ, ಕೆಬಿಎನ್ ಸಿಂಗ್, ಟಿ. ನಟರಾಜನ್ ಹಾಗೂ ಸಿ.ಟಿ. ಮಣಿ ಮೆಕಾಲೈ) ಹಾಗೂ ಒಬ್ಬ ಪೊಲೀಸ್ ವೀಕ್ಷಕರು(ಪರಮ ಪಾಲಸಿಂಗ್ ಸಿದ್ಧು) ಅವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಚುನಾವಣಾಧಿಕಾರಿಗಳು ಈ ವೀಕ್ಷಕರಿಗೆ ಚುನಾವಣಾ ಸಿದ್ಧತೆ ಹಾಗೂ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನ ಸೇರಿದಂತೆ, ವಸ್ತುನಿಷ್ಠ ಹಾಗೂ ನಿರ್ಭಿತ ವಾತಾವರಣದಲ್ಲಿ ಚುನಾವಣೆ ಜರುಗಿಸಲು ಕೈಕೊಂಡ ಕ್ರಮಗಳನ್ನು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ ಸಿಂಗ್ ರಾಥೋರ್ ಅವರು ಚುನಾವಣಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಹಾಗೂ ಬಂದೋಬಸ್ತ್ ವ್ಯವಸ್ಥೆ ಬಗ್ಗೆ ವಿವರಿಸಿದರು. ವ್ಯವಸ್ಥಿತ ಮತದಿಂದ ಶಿಕ್ಷಣ ಹಾಗೂ ಭಾಗವಹಿಸುವಿಕೆ ಕಾರ್ಯಕ್ರಮದ ಜಿಲ್ಲಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ ಅವರು  ಜಿಲ್ಲೆಯಲ್ಲಿ ಮತದಾರರ ನೋಂದಣಿ ಬಗ್ಗೆ ಅರಿವು ಮೂಡಿಸುವ ಮೊದಲ ಹಂತದ ಕಾರ್ಯಕ್ರಮ ಕಳೆದ ವಾರ ಪೂರ್ಣಗೊಂಡಿದ್ದು, ಎರಡನೆ ಹಂತದ ಚುನಾವಣಾ ಪ್ರಚಾರ ಪ್ರಾರಂಭಗೊಂಡಿದ್ದು, ಮೇ 3ರ ವರೆಗೆ ಜಿಲ್ಲಾದ್ಯಂತ ಮತದಾನದ ಮಹತ್ವ ಸಾರುವ ಮತದಾರ ಜಾಗೃತಿ ಕಾರ್ಯಕ್ರಮ ಜರುಗಲಿದೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement