ಹಾದಿಮನಿ ಪ್ರಚಾರ (ಸುದ್ದಿ ಸಂಕ್ಷೇಪ)
ಹಾನಗಲ್ಲ: ಹಾನಗಲ್ಲ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಸವರಾಜ ಹಾದಿಮನಿ ಇತ್ತೀಚೆಗೆ ತಾಲೂಕಿನ ಕೋಣನಕೊಪ್ಪ, ಕತ್ರಿಕೊಪ್ಪ, ಸಮ್ಮಸಗಿ, ಲಕ್ಷ್ಮಿಪುರ, ಸಾಗರವಳ್ಳಿ, ಶಿವಪುರ, ಕಾಮನಹಳ್ಳಿ,ಹಿರೇಕಣಗಿ ಹಾಗೂ ಚಿಕ್ಕಾಂಶಿ-ಹೊಸೂರು ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚಿಸಿದರು. ಈ ಸಂದರ್ಭ ಹಾದಿಮನಿ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ಹರಿದಿರುವ ಧರ್ಮಾ ಹಾಗೂ ವರದಾ ನದಿಯಿಂದ ನೀರೆತ್ತುವ ಮೂಲಕ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಹೊಸ ನೀರಾವರಿ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ತಮ್ಮ ಪಕ್ಷ ರೈತರ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಿದೆ ಎಂದರು. ಪ್ರಚಾರ ಕಾರ್ಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಭೋಜರಾಜ ಕರೂದಿ, ತಾಲೂಕು ಅಧ್ಯಕ್ಷ ಜಿ.ಬಿ. ಗುಡ್ಡಪ್ಪನವರ್, ಪಕ್ಷದ ಮುಖಂಡರಾದ ಅಶೋಕ ಈಳಿಗೇರ, ವೀರಣ್ಣ ನಿಂಬಣ್ಣನವರ್, ರವಿಕುಮಾರ ಬೆಲ್ಲದ, ಎಸ್.ಆರ್. ಪಾಟೀಲ, ಗೀತಾ ಪೂಜಾರ ಹಾಗೂ ಶಂಭು ಕೊಂಡೋಜಿ ಇನ್ನಿತರರಿದ್ದರು.
ಕಾಂಗ್ರೆಸ್ ಸೇರ್ಪಡೆ
ಹಾನಗಲ್ಲ: ತಾಲೂಕಿನ ದೇವರ ಹೊಸಪೇಟೆ ಗ್ರಾಮದಲ್ಲಿ ಬಿಜೆಪಿ ಮತ್ತು ಕೆಜೆಪಿ ತೊರೆದ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಮನೋಹರ ತಹಸೀಲ್ದಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಮಾರ್ಕಂಡೆಪ್ಪ ಕ್ಯಾಬಳ್ಳಿ, ನಾರಾಯಣ ಬಡಿಗೇರ, ರಾಜಶೇಖರ ಮಂತ್ರೋಡಿ, ಚನ್ನಬಸಪ್ಪ ಶ್ಯಾಬಾಳಿ, ರೇವಣಸಿದ್ದಪ್ಪ ಸಾತಣ್ಣನವರ, ರಾಮಣ್ಣ ಕುರುಬರ, ಬಸವರಾಜ ಕೋತಂಬರಿ, ಫಕ್ಕೀರಪ್ಪ ಬಾಳಂಬೀಡ, ಸದಾನಂದ ಮಂತ್ರೋಡಿ, ನಾಗಪ್ಪ ಹೊಂಬಳಿ, ಶಿವಮೂರ್ತಯ್ಯ ವೆಂಕಟಾಪುರ, ಮತ್ತಿತರರು ಸೇರ್ಪಡೆಗೊಂಡರು.
ತರಬೇತಿಗೆ ಆಯ್ಕೆ
ಹಾನಗಲ್ಲ: ಪಟ್ಟಣದ ಶ್ರೀಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿಎ ಹಾಗೂ ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿರುವ 11 ವಿದ್ಯಾರ್ಥಿಗಳು ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ಗ್ರ್ಯಾಜುವೇಟ್ ಫಿನಿಶಿಂಗ್ ಸ್ಕೂಲಿನ ಮೂರು ತಿಂಗಳ ರೆಸಿಡೆನ್ಶಿಯಲ್ ತರಬೇತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಎನ್.ಬಿ. ಬಣಕಾರ ತಿಳಿಸಿದ್ದಾರೆ. ಧಾರವಾಡ ವಿದ್ಯಾಪೋಷಕ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಪ್ರತಿಭಾನ್ವಿತ ಆರ್ಥಿಕ ಅಸಹಾಯಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ, ಸಂಹನ ಕಲೆ, ಅಭಿವ್ಯಕ್ತಿಗೊಳಿಸುವ ಕಲೆ ಮುಂತಾದ ಕೌಶಲ್ಯಗಳಲ್ಲಿ ತರಬೇತಿಗೊಳಿಸಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡುವ ಸೇವೆ ಸಲ್ಲಿಸುತ್ತಿದ್ದು, ಇದುವರೆಗೆ ಸುಮಾರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಸ್ಮರಿಸಬಹುದಾಗಿದೆ. ವಿದ್ಯಾಪೋಷಕ ಸಂಸ್ಥೆ ತರಬೇತಿಗೆ ಸ್ಥಳೀಯ ಮಹಾವಿದ್ಯಾಲಯದ ಬಿಎ-ಬಿಕಾಂ ಅಂತಿಮ ವರ್ಗದ ವಿದ್ಯಾರ್ಥಿಗಳಾದ ಮಹದೇವ ಬೆಟಗೇರಿ, ಕೆ.ವಿ. ರಜನಿಕಾಂತ, ಆನಂದ ಕಲಾಲ, ರಮ್ಯಾ ತಿರಕಣ್ಣನವರ, ದೀಪಾ ಶೀಮಂಡನವರ, ಶೃತಿ ನೀರಲಗಿ, ಉಮೇಶ ಆನವಟ್ಟಿ, ಇಮಾಂಬಿ ನದಾಫ್, ವಿನಯ ಕಾತವಳ್ಳಿ, ಮೊಹಮದ್ ಗೌಸ್ ಮತ್ತು ಮೊಹ್ಮದ್ ಜಾವೇದ್ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆ ಅಧ್ಯಕ್ಷ ಎ.ಎಸ್. ಬಳ್ಳಾರಿ, ಉಪಾಧ್ಯಕ್ಷ ಪಿ.ವೈ. ಗುಡಗುಡಿ, ಪ್ರಾಂಶುಪಾಲ ಪ್ರೊ. ಎನ್.ಬಿ. ಬಣಕಾರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಸಿ. ಮಂಜುನಾಥ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಅಧಿಕಾರಿ ನೇಮಕ
ಹಾವೇರಿ: ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ಥಾಪಿಸಲಾದ ಕಂಟ್ರೋಲ್ ರೂಂನಲ್ಲಿ ಸಾರ್ವಜನಿಕರಿಂದ ದಾಖಲಾಗುವ ದೂರುಗಳ ವಿವರ ಪಡೆಯಲು, ಅಗತ್ಯ ಕ್ರಮ ಜರುಗಿಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹನುಮಂತಪ್ಪ ಜಿ. (ಮೊ-9480560686)ಅವರನ್ನು ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ.