ಹಾವೇರಿ: ಅಂಚೆ ಮತಪತ್ರ ಸೌಲಭ್ಯ
ಹಾವೇರಿ: ಜಿಲ್ಲೆಯಲ್ಲಿ ಜಿಲ್ಲಾ ಆಡಳಿತ ಒಟ್ಟು 6,130 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿದ್ದು, ಸಿಬ್ಬಂದಿ ತಾವು ಸೇವೆ ಸಲ್ಲಿಸುತ್ತಿರುವ ಸ್ಥಳದಿಂದಲೇ ಮತದಾನಕ್ಕೆ ಅನುವಾಗುವಂತೆ ಅಂಚೆ ಮತಪತ್ರಗಳನ್ನು ತರಿಸಿಕೊಡುವ ವ್ಯವಸ್ಥೆ ಮಾಡಿದೆ. ಈ ಸಂಬಂಧದಲ್ಲಿ ಕರ್ತವ್ಯನಿರತ ಚುನಾವಣಾ ಸಿಬ್ಬಂದಿಯಿಂದ ನಮೂನೆ ನಂ 12ನ್ನು ಭರ್ತಿ ಮಾಡಿಸಿ, ಸಂಬಂಧ ಪಟ್ಟ ಚುನಾವಣಾಧಿಕಾರಿಗಳಿಗೆ ಕಳುಹಿಸಿಯಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾದವರಲ್ಲಿ ಇದೇ ಜಿಲ್ಲೆಯವರ ಸಂಖ್ಯೆ 5049 ಇದ್ದರೆ, ಅನ್ಯ ಜಿಲ್ಲೆಯ ಮತದಾರರ ಪಟ್ಟಿಯಲ್ಲಿದ್ದು, ಈ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ 1088 ಅಧಿಕಾರಿ, ಸಿಬ್ಬಂದಿ ಇದ್ದಾರೆ. ಅಂಚೆ ಮತ ಪತ್ರ ಸೌಲಭ್ಯದಿಂದ ಕರ್ತವ್ಯ ನಿರತ ಸಿಬ್ಬಂದಿಗೆ ತಾವು ಇರುವ ಸ್ಥಳದಿಂದಲೇ ಅಂಚೆ ಮೂಲಕ ಮತ ಚಲಾವಣೆ ಸಾಧ್ಯವಾಗಲಿ ಎಂದು ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ ತಿಳಿಸಿದ್ದಾರೆ.
ಅಭಿಯಾನ ತಂಡದ ಮಾರ್ಗ
ಹಾವೇರಿ: ಏ. 23ರಂದು ಹಾವೇರಿ ತಾಲೂಕು ನಾಗೇಂದ್ರನಮಟ್ಟಿ, ಗಣಜೂರು, ಹತ್ತಿಮತ್ತೂರು ಮತ್ತು ಕಳಸೂರುಗಳಲ್ಲಿ ಅಭಿಯಾನ ತಂಡ ಸಂಚರಿಸಲಿದೆ. 24ರಂದು ಸವಣೂರು ತಾಲೂಕು ಸವಣೂರು, ಗುಂಡೂರು, ಹೊಸನಿರಲಗಿ ಹಾಗೂ ಮಂತ್ರೋಡಿ. 25ರಂದು ಶಿಗ್ಗಾಂವಿ ತಾಲೂಕು ಶಿಗ್ಗಾಂವಿ (ಹಳೆ ತಹಸೀಲ್ದಾರ ಕಚೇರಿ) ಕಾಮನಹಳ್ಳಿ, ಗೊಟಗೊಡಿ ಹಾಗೂ ವನಹಳ್ಳಿ. 26ರಂದು ಹಾನಗಲ್ಲ ತಾಲೂಕು ಬಂಕಾಪುರ, ವಳಗೇರಿ, ಇನಾಂ ದ್ಯಾಮನಕೊಪ್ಪ ಹಾಗೂ ಬೆಳಗಾಲಪೇಟೆ, 27ರಂದು ಹಾನಗಲ್ಲ (ಹಳೆ ಬಸ್ ನಿಲ್ದಾಣ ಹತ್ತಿರ) ಕಾಮನಹಳ್ಳಿ, ಸಾಗರವಳ್ಳಿ ಹಾಗೂ ಮಂತಗಿ. 28ರಂದು ಹಿರೇಕೆರೂರು ತಾಲೂಕು ಅಕ್ಕಿಆಲೂರು, ಅರಿಶಿಣಗುಪ್ಪಿ, ಕೊಂಡೊಜಿ ಹಾಗೂ ಹಂಸಭಾವಿ. 29ರಂದು ರಾಣಿಬೆನ್ನೂರು ತಾಲೂಕು ತಾವರಗಿ, ಬಸರಿಹಳ್ಳಿ ಮತ್ತು ಕೋಡ. 30ರಂದು ರಾಣಿಬೆನ್ನೂರು (ಮಿನಿ ವಿಧಾನಸೌಧ), ಮೈದೂರು, ಯತ್ತಿನಹಳ್ಳಿ ಹಾಗೂ ಗುಡಗೂರು. ಮೇ 1ರಂದು ಕಾಕೋಳ, ವೆಂಕಟಾಪುರ, ಕಜ್ಜರಿ, ಹಾಗೂ ಮೊಟೇಬೆನ್ನೂರು, 2ರಂದು ಬ್ಯಾಡಗಿ ತಾಲೂಕು ಬ್ಯಾಡಗಿ (ಬಸ್ ನಿಲ್ದಾಣ) ರಾಮಗೊಂಡನಹಳ್ಳಿ, ಕೊಲ್ಲಾಪುರ ಹಾಗೂ ಬನ್ನಿಹಟ್ಟಿ, 3ರಂದು ಹಾವೇರಿ ತಾಲೂಕು ಹಾವೇರಿ (ನಗರ ಸಭೆ), ಶಿಭಾರ, ಬಸನಕಟ್ಟಿ ಹಾಗೂ ಯಲಗಚ್ಚದಲ್ಲಿ ಪ್ರಚಾರ ಜಾಗೃತಿ ಕಾರ್ಯಕ್ರಮ ಜರುಗಲಿವೆ.
ಮುದ್ರಣಕ್ಕೆ ಅಧಿಕಾರಿಗಳ ನೇಮಕ
ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2013ರ ಹಿನ್ನೆಲೆಯಲ್ಲಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮತಪತ್ರಗಳನ್ನು ಮುದ್ರಣ ಮಾಡುವ ಕಾರ್ಯಕ್ಕೆ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಚುನಾವಣಾಧಿಕಾರಿ ವಿ. ಅನ್ಬುಕುಮಾರ ಆದೇಶ ಹೊರಡಿಸಿದ್ದಾರೆ. ಹಾವೇರಿ ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ ಹಾಗೂ ಹಾನಗಲ್ಲ ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಾಳಿ ಅವರು ಈ ಕಾರ್ಯಕ್ಕೆ ನಿಯುಕ್ತಿಗೊಂಡಿದ್ದಾರೆ.
ಭಿತ್ತಿಚಿತ್ರ: ಮತದಾನ ಜಾಗೃತಿ
ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013ರ ಅಂಗವಾಗಿ ಕಡ್ಡಾಯ ಮತದಾನ ಕುರಿತು ಮತದಾರರಿಗೆ ಅರಿವು ಮೂಡಿಸುವ ಎರಡನೇ ಹಂತದ ಕಾರ್ಯಕ್ರಮ ಇತ್ತೀಚೆಗೆ ಶಿಗ್ಗಾಂವಿ ತಾಲೂಕು ತಡಸ ಹಾಗೂ ದುಂಡಶಿಯಲ್ಲಿ ಗ್ರಾಮಗಳಲ್ಲಿ ಜರುಗಿತು. ಕಾರ್ಯಕ್ರಮಗಳಲ್ಲಿ ಭಿತ್ತಿಚಿತ್ರ ಪ್ರದರ್ಶನ ಹಾಗೂ ಬೀದಿಗಳಲ್ಲಿ ರಂಗೋಲಿ ಬಿಡಿಸುವ ಮೂಲಕ ಕಡ್ಡಾಯ ಮತದಾನದ ಕುರಿತು ಅರಿವು ಮೂಡಿಸಲಾಯಿತು. ತಡಸ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಪಿ.ಎನ್. ಕೋಟಿ, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಓ, ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ದುಂಡಶಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಎಲ್.ಎಫ್. ಬಗಾಡೆ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕಾರ್ತೆಯರು ಹಾಗೂ ಸ್ತ್ರೀ-ಶಕ್ತಿ ಸದಸ್ಯರು ಪಾಲ್ಗೊಂಡಿದ್ದರು.