ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದ ಕಾಂಗ್ರೆಸ್ಸಿಗರು

Rashmi Kasaragodu
Updated On : 25 Apr 2013, 11:49 am

ಹಾವೇರಿ: ವಿಧಾನಸಭೆ ಚುನಾವಣೆ ಇನ್ನೂ ಬಾಕಿ ಉಳಿದಿರುವಾಗಲೇ ಕಾಂಗ್ರೆಸ್ ನಾಯಕರು ತಾವೇ ಗೆಲುವು ಸಾಧಿಸಿದಂತೆ ಬಿಗುತ್ತಿದ್ದು, ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತಾಗಿದೆ ಎಂದು ಜೆಡಿಎಸ್ ರಾಜ್ಯಧ್ಯಕ್ಷರು ಆಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರದ್ದು ಕೇವಲ ಭ್ರಮೆ ಎಂಬುದು ಚುನಾವಣೆ ನಂತರ ಅವರಿಗೆ ಮನವರಿಕೆಯಾಗಲಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಈಗಲೂ ಕಾಂಗ್ರೆಸ್ ಪಕ್ಷದ ನಾಯಕರು ಮಾತನಾಡಿಕೊಳ್ಳಲಾರಂಭಿಸಿದ್ದು ಪ್ರಸಕ್ತ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್ಗೆ ತಕ್ಕಪಾಠ ಕಲಿಸದೆ ಇರಲಾರ ಎಂದು ಅಭಿಪ್ರಾಯಪಟ್ಟರು.
ಕನಸು ಕಾಣುತ್ತಿರುವ ಬಿಎಸ್ವೈ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾದರೆ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರದಲ್ಲಿರುವ ಕನಸನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದರು.
ಬಿಎಸ್ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಹಗರಣಗಳ ಬಗ್ಗೆ ಜನತೆ ನೋಡಿದ್ದಾರೆ. ಕೆಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಪಾಲ್ಗೊಳ್ಳಲು ಬೇಕಾದಷ್ಟು ಶಾಸಕರನ್ನು ಮತದಾರ ನೀಡುವುದಿಲ್ಲ ಎಂದರು.
ಜೆಡಿಎಸ್ ಪೂರ್ಣ ಬಹುಮತದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಯಾವುದೇ ಪಕ್ಷದೊಂದಿಗೆ ಯಾವುದೇ ಕಾರಣಕ್ಕೂ ಸರ್ಕಾರ ರಚನೆಗೆ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಎಚ್ಡಿಕೆ, ಪ್ರತಿಪಕ್ಷದಲ್ಲಿ ಇದ್ದುಕೊಂಡೆ ನಾಡಿನ ಜನರ ಸೇವೆ ಮಾಡುತ್ತೇವೆ ಎಂದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ, ಜಿಲ್ಲಾಧ್ಯಕ್ಷ ಗಾಜೀಗೌಡ್ರ, ಹಾವೇರಿ (ಮೀಸಲು) ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರಮೇಶ್ವರಪ್ಪ ಮೇಗಳಮನಿ, ಹಿರೇಕೆರೂರ ಕ್ಷೇತ್ರದ ಅಭ್ಯರ್ಥಿ ಡಿ.ಎಂ. ಸಾಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement