ಹಾನಗಲ್ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿ
ಹಿರೇಕೆರೂರು: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ. ಈ ಭಾಗದ ಜನತೆಯ ನೀರಾವರಿ ಯೋಜನೆಗಾಗಿ ತುಂಗಾ ಮೇಲ್ದಂಡೆ ಕಾಲುವೆ ನಮ್ಮ ಸುದೀರ್ಘ ಹೋರಾಟದ ಪ್ರತಿಫಲ. ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ ನೀರಾವರಿ ಯೋಜನೆಗಳನ್ನು ತರುವ ಮೂಲಕ ತಾಲೂಕನ್ನು ಹಸಿರು ನಾಡನ್ನಾಗಿಸಲು ಪಣ ತೊಟ್ಟಿದ್ದೇವೆ. ಬ್ಯಾಟರಿ ಗುರುತಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮನವಿ ಮಾಡಿದರು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬನ್ನಿಕೋಡ ತಾಲೂಕಿನ ಕಡೂರ ಗ್ರಾಮದಲ್ಲಿ ಮಾತನಾಡಿ, ಜೆಡಿಎಸ್ ವರಿಷ್ಠರು ಹಾಗೂ ವಿರೋಧಿಗಳು ಕುತಂತ್ರದಿಂದ ತಮಗೆ ಟಿಕೆಟ್ ತಪ್ಪಿಸಿದ್ದಾರೆ. ಹೀಗಾಗಿ, ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು. ತುಂಗಾ ಕಾಲುವೆ ಹೋರಾಟ ಸಮಿತಿ ಅಧ್ಯಕ್ಷನಾಗಿ ಹೋರಾಟ ಮಾಡಿರುವುದು ಈಗ ಫಲ ನೀಡಿದೆ. ಇದರಿಂದಾಗಿ ಈ ಭಾಗದ 500 ಎಕೆರೆ ಜಮೀನು ನೀರಾವರಿ ಪ್ರದೇಶವಾಗಿದೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ಗುರಿಯಾಗಿರುವ ತಮ್ಮನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮೊದಲು ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು. ನ್ಯಾಯವಾದಿ ಎಚ್.ಎಸ್. ಕೋಣನವರ, ಶಿವನಗೌಡ ಸಾಹುಕಾರ, ಅಶೋಕ ಪಾಟೀಲ ಮುಂತಾದವರು ಇದ್ದರು.