ಖಾದ್ರಿಯವರಿಂದ ದಬ್ಬಾಳಿಕೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಏ. 26
ಬಿಜೆಪಿ ಅಭ್ಯರ್ಥಿ, ಸಚಿವ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮತದಾರರನ್ನು ಪ್ರಚೋದಿಸುತ್ತಿರುವುದನ್ನು ಆಕ್ಷೇಪಿಸಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ ಖಾದ್ರಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಹಲ್ಲೆಗೆ ಯತ್ನಿಸಿದ್ದರು ಎಂದು ತಾಲೂಕು ಕೃಷಿಕ ಸಮಾಜದ ಸದಸ್ಯ ಎಂ.ಬಿ. ಹಿರೇಮಠ ಆರೋಪಿಸಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದನೆ!: ಈ ಕುರಿತಂತೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು, ಏ. 24ರಂದು ಕಾಂಗ್ರೆಸ್ ಅಭ್ಯರ್ಥಿ ರಾತ್ರಿ 10ರ ಸುಮಾರಿಗೆ ಅಂದಲಗಿ ಗ್ರಾಮದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದರು.
ಈ ಸಂದರ್ಭದಲ್ಲಿ ತಾವು ಗ್ರಾಮಕ್ಕೆ ತೆರಳಿದ್ದೇವು. ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ಭಾಷಣದಲ್ಲಿ ಸಚಿವ ಬೊಮ್ಮಾಯಿ ಹಾಗೂ ಬಿಜೆಪಿ ವಿರುದ್ಧವಾಗಿ ಮತದಾರರನ್ನು ಪ್ರಚೋದಿಸುವ ರೀತಿ ಭಾಷಣ ಮಾಡುತ್ತಿರುವುದಕ್ಕೆ ಬಲವಾಗಿ ಖಂಡಿಸಿದ್ದೇವು ಎಂದಿದ್ದಾರೆ.
ಇದರಿಂದ ಕೆಂಡಾಮಂಡಲವಾದ ಖಾದ್ರಿ ಹಾಗೂ ಅವರ ಬೆಂಬಲಿಗರು, ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಹಲ್ಲೆಗೂ ಯತ್ನಿಸಿದ್ದರು ಎಂದು ದೂರಿರುವ ಹಿರೇಮಠ, ಖಾದ್ರಿಯವರೇ ಶಾಸಕರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ತಾವು ಪ್ರಶ್ನಿಸಿದ್ದರಿಂದ ಮತ್ತಷ್ಚು ಆಕ್ರೋಶಗೊಂಡು ಇದನ್ನೆಲ್ಲ ಕೇಳಲು ನೀನ್ಯಾರು ಎಂದು ತಮ್ಮ ಮೇಲೆ ಏರಿ ಬಂದಿದ್ದರು ಎಂದು ಆರೋಪಿಸಿದ್ದಾರೆ.
ಇಲ್ಲಸಲ್ಲದ ಆರೋಪ: ಬೊಮ್ಮಾಯಿ, ಶಾಸಕರಾಗಿ ಆಯ್ಕೆಗೊಂಡ ನಂತರ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮತದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕ್ಷೇತ್ರಾದ್ಯಂತ ಅವರ ಪರ ಮತದಾರರು ಒಲವು ತೋರಿಸುತ್ತಿರುವುದರಿಂದ ಚುನಾವಣೆಯಲ್ಲಿ ತಮಗೆ ಸೋಲಾಗಲಿದೆ ಎಂಬ ಹತಾಶಯ ಭಾವನೆಯಿಂದ ಖಾದ್ರಿ, ಬೊಮ್ಮಾಯಿ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆಂದು ಹಿರೇಮಠ ತಿಳಿಸಿದ್ದಾರೆ.
ವಲಸೆ ಹೋಗಿದ್ದರು: ಖಾದ್ರಿ ಶಾಸಕರಾಗಿದ್ದ ಸಂದರ್ಭದಲ್ಲಿ ಉದ್ಯೋಗ ಅರಿಸಿಕೊಂಡು ಕೂಲಿ ಕಾರ್ಮಿಕರು ಗುಳೆ ಹೋಗುತ್ತಿದ್ದರು. ಅವರನ್ನು ತಡೆಯುವ ಕನಿಷ್ಠ ಪ್ರಯತ್ನವನ್ನೂ ಮಾಡಿರಲಿಲ್ಲ. ಅಲ್ಲದೇ, ಕೂಲಿಗಾಗಿ ಕಾಳು ಯೋಜನೆಯಲ್ಲಿ ಬಂದಂತಹ ಆಹಾರ ಧಾನ್ಯವನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದರು ಎಂದು ದೂರಿರುವ ಹಿರೇಮಠ, ಬೊಮ್ಮಾಯಿ ಅವರು ಕಾರ್ಮಿಕರ ಪರವಾಗಿ ಮಾಡಿರುವ ಕೆಲಸ ಕಾರ್ಯಗಳನ್ನು ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಡೋಂಗಿ ರಾಜಕಾರಣ: ಚುನಾವಣೆ ಎದುರಾದಾಗ ಕೂಲಿ-ಕಾರ್ಮಿಕರು ಸೇರಿದಂತೆ ಬಡ ಬಗ್ಗರ ಕಾಳಜಿ ಮೆರೆಯುವಂತಹ ಡೋಂಘಿತನ ಪ್ರದರ್ಶಿಸುವ ಕಾಂಗ್ರೆಸ್ಸಿಗರಿಗೆ ಪ್ರಸಕ್ತ ಚುನಾವಣೆಯಲ್ಲಿ ಮತದಾರ ತಕ್ಕಪಾಠ ಕಲಿಸದೇ ಇರಲಾರ.
ಕಾಂಗ್ರೆಸ್ ನಾಯಕರು ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ವಿರುದ್ಧ ಇಲ್ಲಸಲ್ಲದ ನಾಟಕವಾಡುತ್ತಿದ್ದಾರೆ. ಕ್ಷೇತ್ರದ ಜನತೆ ಹಾಗೂ ಸಮಸ್ತ ರೈತ ಸಮುದಾಯ ಬಸವರಾಡ ಬೊಮ್ಮಾಯಿ ಅವರ ಪರವಾಗಿದೆ ಎಂದು ಹೇಳಲು ತಮಗೆ ಹೆಮ್ಮೆ ಎನಿಸುತ್ತಿದೆ. ಈ ಮಧ್ಯೆ ಆರೋಪಗಳು ಪ್ರಸಕ್ತ ಚುನಾವಣೆ ಫಲಿತಾಂಶದಿಂದ ಸುಳ್ಳಾಗಲಿವೆ ಎಂದೂ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.