ಪ್ರಚಾರ: ಪರೀಕ್ಷಾರ್ಥಿಗಳ ಪರದಾಟ
ಹಾವೇರಿ: ವಿಧಾನಸಭೆ ಚುನಾವಣಾ ಪ್ರಚಾರಾರ್ಥ ಕಾಂಗ್ರೆಸ್ ಶುಕ್ರವಾರ ಮಧ್ಯಾಹ್ನ ಆಯೋಜಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಹಿರಂಗ ಸಮಾವನ್ನುದ್ದೇಶಿಸಿ ಮಾತನಾಡಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯೇ.. ಇಂತಹದೊಂದು ಪ್ರಶ್ನೆ ಪ್ರಜ್ಞಾವಂತ ಮತದಾರರನ್ನು ಮಾತ್ರವಲ್ಲದೇ ಅಧಿಕಾರಿಗಳನ್ನು ಕಾಡಿದ್ದು ಸುಳ್ಳಲ್ಲ. ಇದಕ್ಕೆ ಕಾರಣವಿಷ್ಟೇ ಸಮಾವೇಶ ಅಯೋಜಿಸಿದ್ದ ಸ್ಥಳಕ್ಕೆ ಕೂಗಳತೆ ದೂರದಲ್ಲಿ ಮುನ್ಸಿಪಲ್ ಹೈಸ್ಕೂಲ್‌ನ ಪರೀಕ್ಷಾ ಕೇಂದ್ರದಲ್ಲೇ ಪದವಿ ಪರೀಕ್ಷೆಗಳು ನಡೆಯುತ್ತಿದ್ದುದೇ ಇಂಥ ಶಂಕೆಗೆ ಎಡೆಮಾಡಿಕೊಟ್ಟಿತು.
ಸಮರ್ಥಿಸಿಕೊಂಡ ಅಧಿಕಾರಿಗಳು: ಮೂಲದ ಪ್ರಕಾರ ರಾಹುಲ್ ಗಾಂಧಿ ಕೈಗೊಂಡ ಬಹಿರಂಗ ಚುನಾವಣಾ ಪ್ರಚಾರ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಯಾವುದೇ ರೀತಿ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂಬ ಸಮರ್ಥನೆ ನೀಡಿದ್ದು, ರಾಜಕೀಯ ಪಕ್ಷಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿರುವ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬಿಎ ಪ್ರಥಮ ಕನ್ನಡ ಹಾಗೂ ಬಿಕಾಂ ಪ್ರಥಮ ಅಕೌಂಟೆನ್ಸಿ ಪರೀಕ್ಷೆಗಳು ನಡೆಯುತ್ತಿದ್ದು, ಸುಮಾರು 475 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆ ಉತ್ಸಾಹದಲ್ಲಿರುವ ಸಂಘಟಕರು ಮಾತ್ರ ವಿದ್ಯಾರ್ಥಿಗಳ ಪರೀಕ್ಷೆಯನ್ನು ಲೆಕ್ಕಿಸದೇ ಬೆಳಗ್ಗೆ 10ರಿಂದ ಮದ್ಯಾಹ್ನ 1 ಗಂಟೆವರೆಗೆ ಧ್ವನಿವರ್ಧಕ ಬಳಕೆ ಮಾಡಿದ್ದಲ್ಲದೇ ಕಿಕ್ಕಿರಿದ್ದು ಸೇರಿದ್ದ ಕಾರ್ಯಕರ್ತರು ಯುವರಾಜನಿಗೆ ಹಾಕಿದ ಜಯಘೋಷಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತೊಂದರೆಯಾಯಿತು.
ಟೈಟ್ ಸೆಕ್ಯೂರಿಟಿ ತಂದ ಕಿರಿಕಿರಿ: ರಾಹುಲ್ ಗಾಂಧಿ ಅವರಿಗೆ ನಿಯೋಜನೆ ಮಾಡಿದ್ದ ಟೈಟ್ ಸೆಕ್ಯೂರಿಟಿ ಇದೇ ಮಾರ್ಗದಲ್ಲಿ ಪರೀಕ್ಷಾ ಕೊಠಡಿಗೆ ತೆರಳುತ್ತಿದ್ದ ಪದವಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಿದ್ದಂತೂ ಸತ್ಯ. ರಾಹುಲ್ ಗಾಂಧಿ ಕಾರ್ಯಕ್ರಮವೆಂದ ಮೇಲೆ ಕೇಳಬೇಕೆ ನೂರಾರು ಪೊಲೀಸರು ಹಾಗೂ ವಾಹನಗಳು ಅಲ್ಲಲ್ಲಿ ನಡೆಯುತ್ತಿದ್ದ ತಪಾಸಣೆಯಿಂದ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುವಂತಾಯಿತು.
ನುಣುಚಿಕೊಂಡ ಡಿಸಿ: ಪರೀಕ್ಷೆ ನಡೆಯುತ್ತಿದ್ದರೂ ಸಮಾವೇಶಕ್ಕೆ ಅನುಮತಿ ನೀಡಿದ್ದು ಸರಿಯೇ.. ಈ ಕುರಿತು ಜಿಲ್ಲಾಧಿಕಾರಿ ಅನ್ಬುಕುಮಾರ್ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಈ ವಿಷಯ ಚುನಾವಣಾಧಿಕಾರಿ ವ್ಯಾಪ್ತಿಗೆ ಬರುತ್ತದೆ ಎಂದಷ್ಟೇ ಉತ್ತರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡರು.
ಬಳಿಕ ಚುನಾವಣಾಧಿಕಾರಿ ಚನ್ನಬಸಪ್ಪ ಅವರನ್ನು ಸಂಪರ್ಕಿಸಿದಾಗ, ಭಾಷಣ ಮಾಡುವ ಸ್ಥಳ ಪರೀಕ್ಷಾ ಕೊಠಡಿಗಿಂತ 100 ಮೀ. ಅಂತರದಲ್ಲಿದೆ. ಹೀಗಾಗಿ ಸಮಾವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಗಾಳಿ ಜೊತೆ ಧೂಳು: ಪಕ್ಷದ ಮುಖಂಡರು ರಾಜ್ಯದಲ್ಲಿ ಕಾಂಗ್ರೆಸ್ ಗಾಳಿಯಿದೆ ಎನ್ನುವ ಭಾಷಣದ ನಡುವೆಯೇ ಕಾಂಗ್ರೆಸ್ ಧೂಳು ಸಹ ಇದೆ ಎಂಬುದನ್ನು ಸಾಬೀತು ಮಾಡಿದ ಘಟನೆ ನಡೆಯಿತು. ಸಾಮಾನ್ಯವಾಗಿ ನಗರ ಪ್ರದೇಶ ವ್ಯಾಪ್ತಿ ಹೊರ ಭಾಗದಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗುತ್ತದೆ. ಶುಕ್ರವಾರ ರಾಹುಲ್ ಗಾಂಧಿ ಸಂಚರಿಸುತ್ತಿದ್ದ ಕಾಪ್ಟರ್‌ಗೆ ವೇದಿಕೆಯ ಪಕ್ಕದಲ್ಲೇ ಹೆಲಿಪ್ಯಾಡ್ ನಿರ್ಮಿಸಿದ್ದು ಕಾಪ್ಟರ್ ಭೂಸ್ಪರ್ಶ ಮಾಡುತ್ತಿದ್ದಂತೆ ಮೇಲೆದ್ದ ಧೂಳು ಮಾತ್ರ ನೆರೆದಿದ್ದ ಕಾರ್ಯಕರ್ತರನ್ನು ಮುಜಗುರಕ್ಕೀಡು ಮಾಡಿತಲ್ಲದೇ, ಕಾಪ್ಟರ್‌ನ ಕರ್ಕಶ ಧ್ವನಿ ನೆರೆದಿದ್ದ ಸಾವಿರಾರು ಕಾರ್ಯಕರ್ತರಿಗೆ ಕಿವಿಗಡುಚ್ಚುವಂತೆ ಮಾಡಿತು.
- ಶಿವಾನಂದ ಮಲ್ಲನಗೌಡರ