ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ
ಹಿರೇಕೆರೂರು: ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ. ಅಶೋಕ, ಅವರ ಪತ್ನಿ ಎಂ. ರಮಾದೇವಿ ಹಾಗೂ ಬೆಂಬಲಿಗರೊಂದಿಗೆ ಶುಕ್ರವಾರ ರೋಡ್ ಶೋ ಮೂಲಕ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ಮಾಡಿ ಮತ ಯಾಚಿಸಿದರು.
ತಾಲೂಕಿನ ಚಪ್ಪರದಹಳ್ಳಿ, ಯಲಿವಾಳ, ಚಿಕ್ಕಮೊರಬ, ಹಿರೇಮೊರಬ, ಚಿಕ್ಕಯಡಚಿ, ಹಿರೆಯಡಚಿ, ನಿಡನೇಗಿಲು, ವೀರಾಪುರ, ಕುಡಪಲಿ, ಬುಳ್ಳಾಪುರ, ಬಡಾಸಂಗಾಪುರ ಮುಂತಾದ ಗ್ರಾಮಗಳಲ್ಲಿ ಅವರು ಮತ ಯಾಚನೆ ಮಾಡಿದರು.
ಇದಕ್ಕೂ ಮುನ್ನ ತಾಲೂಕಿನ ಮಕರಿ ಗ್ರಾಮದ ಬಸವರಾಜಪ್ಪ ಮಾಳಗಿ, ರುದ್ರಪ್ಪ ದೊಡ್ಡಮನಿ, ಮಂಜು ನಿಂಬೆಗೊಂದಿ, ಚಂದ್ರು ಇಂಗಳಗೊಂದಿ, ಮಾಲತೇಶ ಆಲದಕಟ್ಟಿ, ಮಂಜು ಕಡೇಮನಿ, ರಮೇಶ ಕುರವತ್ತಿ, ಪ್ರಭು ಕಡೇಮನಿ, ಹುಲ್ಲತ್ತಿ ಗ್ರಾಮದ ಮಾಲತೇಶ ಯರಳ್ಳಿ, ಬಸಪ್ಪ ಮಾವಿನತೋಪು, ಪರಮೇಶ ಕುಡಪಲಿ, ಹನುಮಂತಪ್ಪ ಮಾವಿನತೋಪ ಇತರರು ವಿವಿಧ ಪಕ್ಷ ತೊರೆದು ಎಚ್.ಎಂ. ಅಶೋಕ ಸಮ್ಮುಖ ಬಿಸ್ಸಾರ್ ಸೇರಿದರು.
ವಿವಿಧ ಪಕ್ಷದ ಕಾರ್ಯಕರ್ತರನ್ನು ಬಿಸ್ಸಾರ್ ಕಾಂಗ್ರೆಸ್ಗೆ ಬರಮಾಡಿಕೊಂಡ ಪಕ್ಷದ ಅಭ್ಯರ್ಥಿ ಅಶೋಕ ಮಾತನಾಡಿ, ಎಲ್ಲ ರಾಷ್ಟ್ರೀಯ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ತಾಲೂಕಿನ ಅನೇಕ ಹಳ್ಳಿಗಳಲ್ಲಿ ಸಂಚರಿಸಿದ್ದೇನೆ. ಜನತೆ ತಮ್ಮನ್ನು ಆಶೀರ್ವದಿಸುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರರ ವಂಶದಿಂದ ಬಂದ ನಾನು ತಾಲೂಕಿನಲ್ಲಿ ಉಚಿತ ಸಾಮೂಹಿಕ ವಿವಾಹ, ಅಂಗವಿಕಲರಿಗೆ ಸಹಾಯಧನ, ಅನೇಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಕೈಲಾದ ಸಹಾಯ ಮಾಡಿದ್ದೇನೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗಾಗಿ ತಮ್ಮನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಶಿವರಾಮಪ್ಪ ಮೇಲಗಿರಿ, ಎ. ಅಂಜನಪ್ಪ, ಹನುಮೇಶ, ಕುಬೇರಗೌಡ ಮರಿಗೌಡ್ರ, ನಟರಾಜ ನಂದಿಹಳ್ಳಿ, ಎ.ವಿ. ರಾಘವೇಂದ್ರ, ಅಶೋಕ ಬುದ್ನಿ, ಸರೋಜಾ ಮರಡಿ, ಹೇಮಾ ಬೆಳ್ಳೂರ, ರಾಜು ಮಡಿವಾಳರ, ಬಸಪ್ಪ ಕೋಮನಾಳ ಮತ್ತಿತರರು ಇದ್ದರು.