ಬಿಸಿಲಲ್ಲಿ ಕುಗ್ಗದ ಉತ್ಸಾಹ
ಹಾವೇರಿ: ಉರಿ ಬಿಸಿಲಿನ ತಾಪ ತಾಳಲಾರದೆ ಸಹಸ್ರಾರು ಜನರು ಸೇರಿದ್ದರು. ಕೆಲವರು ಆಸರೆಗೆ ತಲೆ ಮೇಲೆ ಪೇಪರ್ ಹೊದ್ದಿದ್ದರೆ ಮತ್ತೆ ಕೆಲವರು ಕರ್ಚಿಫ್ಗಳ ಮೊರೆ ಹೋಗಿದ್ದರು. 12.20ಕ್ಕೆ ಕಾಂಗ್ರೆಸ್ ಯುವರಾಜ, ಭವಿಷ್ಯದ ಪ್ರಧಾನಿ, ಎಐಸಿಸಿ ಉಪಾಧ್ಯಕ್ಷ ಹೆಲಿಕಾಪ್ಟರ್ ಮೂಲಕ ಧರೆಗಿಳಿಯುತ್ತಿದಂತೆಯೇ ನೆರೆದ ಜನರಲ್ಲಿ ಅವರನ್ನು ನೋಡುವ ತವಕ... ಇಂಥ ಸನ್ನಿವೇಶ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಬಹಿರಂಗ ಪ್ರಚಾರದ ಮೂಲಕ ಮತ ಯಾಚಿಸಲು ಮುನ್ಸಿಪಲ್ ಮೈದಾನಕ್ಕೆ ರಾಹುಲ್ ಗಾಂಧಿ ಆಗಮಿಸುತ್ತಿದಂತೆ ಕಂಡಿತು. ಈ ಮಧ್ಯೆ ಮ್ಯೂಸಿಕ್ ತಂಡದವರು ದೇಶಭಕ್ತಿ ಗೀತೆಗಳನ್ನು ಹಾಡಿದ್ದು ಸೆಕೆ ಅನುಭವ ಜನರಲ್ಲಿ ಬಾರದಂತೆ ನೋಡಿಕೊಂಡಿತ್ತು. ರಾಹುಲ್ ವೇದಿಕೆಗೆ ಆಗಮಿಸಿ ಜನರತ್ತ ಕೈಬಿಸಲಾರಂಭಿಸುತ್ತಿದಂತೆ ಭಾರತ ಮಾತಾಕೀ ಜೈ ಘೋಷಣೆ ಕೇಳಿಬಂತು. ಇನ್ನೂ ಕೆಲವರು ರಾಹುಲ್ ಗಾಂಧಿ ಕೀ ಜೈ, ರಾಹುಲ್ ಜೀ ತುಮ್ ಆಗೆ ಬಡೋ ಹಮ್ ತುಮಾರೆ ಸಾಥ್ ಹೈ ಎಂದು ಕೂಗಿದರು. ಭದ್ರತಾ ವ್ಯವಸ್ಥೆ ತೀವ್ರವಾಗಿದ್ದರಿಂದ ನಾಯಕನನ್ನು ಹತ್ತಿರದಿಂದ ನೋಡಬೇಕೆಂಬ ಜನರಿಗೆ ನಿರಾಶೆ ಮಾಡಿತು. ಕುರ್ಚಿಗಳ ಮೇಲೆ ನಿಂತು ರಾಹುಲ್ ಗಾಂಧಿ ಚಿತ್ರವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿಯಲು ಸರ್ಕಸ್ ಮಾಡುತ್ತಿದ್ದರು. ಜನರಾಸೆ ಅರಿತ ರಾಹುಲ್, 13 ನಿಮಿಷಗಳ ತಮ್ಮ ಭಾಷಣದ ಬಳಿಕ ಪ್ರೇರಕ್ಷಕರ ಗ್ಯಾಲರಿ ಕಡೆಗೆ ಆಗಮಿಸಿ ಕೆಲವರ ಕೈಕುಲಿಕಿದರೆ ದೂರದಲ್ಲಿರುವ ಜನರತ್ತ ಮುಖ ಮಾಡಿ ಮುಗುಳ್ನಗುತ್ತ ಕೈ ಬಿಸಿದರು. ಯುವರಾಜನ ಈ ನಡೆ ಕಾರ್ಯಕರ್ತರು, ಅಭಿಮಾನಿಗಳನ್ನು ಸಂತಸದಲ್ಲಿ ತೇಲಿಸಿತು. ಬಳಿಕ ಪಕ್ಕದಲ್ಲಿರುವ ಹೆಲಿಪ್ಯಾಡ್ಗೆ ರಾಹುಲ್ ತೆರಳಿ ವಿಮಾನದಲ್ಲಿ ಕುಳಿತುಕೊಳ್ಳುವವರೆಗೂ ಜನತೆ ಅವರನ್ನೇ ವೀಕ್ಷಿಸಿದರು.