ಭ್ರಷ್ಟಾಚಾರ: ಬಿಜೆಪಿ, ಜೆಡಿಎಸ್ ವಿಶ್ವದಾಖಲೆ
ಹಾವೇರಿ: ಒಂಬತ್ತು ವರ್ಷಗಳ ಕಾಲ ರಾಜ್ಯವನ್ನಾಳಿದ ಬಿಜೆಪಿ ಹಾಗೂ ಜೆಡಿಎಸ್ ಭ್ರಷ್ಟಾಚಾರದಲ್ಲಿ ವಿಶ್ವದಾಖಲೆ ಮಾಡಿವೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದರು.
ವಿಧಾನಸಭೆ ಚುನಾವಣೆ ಪ್ರಚಾರಾರ್ಥ ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದಶಕಗಳ ಹಿಂದೆ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿತ್ತು. ಆದರೆ 9 ವರ್ಷ ರಾಜ್ಯದಲ್ಲಿ ಆಡಳಿತ ಬಿಜೆಪಿ, ಜೆಡಿಎಸ್ ಭ್ರಷ್ಟಾಚಾರ ಕೂಪದಲ್ಲಿ ಮುಳುಗಿತ್ತು. ಹೀಗಾಗಿ ಅಭಿವೃದ್ಧಿ ಮರೀಚಿಕೆಯಾಯಿತು, ಜನ ಮೂಲಸೌಕರ್ಯಕ್ಕಾಗಿ ಪರದಾಡುವಂತಾಯಿತು ಎಂದರು.
ಭ್ರಷ್ಟಾಚಾರದ ಸ್ವರೂಪ ನೋಡಬೇಕಾದರೆ ಕರ್ನಾಟಕದ ಬೆಂಗಳೂರಿಗೆ ಹೋಗಬೇಕು ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಸ್ವಾರ್ಥ ಸಾಧನೆಗಾಗಿ ರಾಜ್ಯವನ್ನೇ ಹೋಳು ಮಾಡುವಷ್ಟರ ಮಟ್ಟಿಗೆ ಬಿಜೆಪಿಗರು ಹೋಗಿದ್ದರು ಎಂದು ಆರೋಪಿದರು.
ಹಾಸ್ಯಾಸ್ಪದ: ಕರ್ನಾಟಕದಲ್ಲಿ ಬಿಜೆಪಿ ನಾಯಕರು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಕಿಂಚಿತ್ತೂ ಚಕಾರ ಎತ್ತದ ಬಿಜೆಪಿ ಹಿರಿಯ ನಾಯಕರು ದೆಹಲಿಯಲ್ಲಿ ಭ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತು ಎಸೆಯುವುದಾಗಿ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ. ಬಿಜೆಪಿ ನಾಯಕರೇ ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದಾರೆ. 10-12 ಶಾಸಕರನ್ನು ಹಿಂದಿಟ್ಟುಕೊಂಡು ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡಿದ್ದರು. ನಾಡಿನ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಿದ್ದ ಶಾಸಕರು ಈ ಮೂಲಕ ಸಾಮಾನ್ಯ ಜನರ ದನಿಯನ್ನೇ ಹತ್ತಿಕ್ಕಲು ಯತ್ನಿಸಿದ್ದರು ಎಂದು ರಾಹುಲ್ ದೂರಿದರು.
ದನಿಯಾಗಿ: ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ಬಡವರ, ಯುವಕರ, ಮಹಿಳೆಯರ ಹಾಗೂ ಶ್ರೀಸಾಮಾನ್ಯರ ದನಿಯಾಗಿ ಕೆಲಸ ಮಾಡಲಿದೆ. ಅಲ್ಲದೆ ಜನರ ಬೇಕು-ಬೇಡಗಳಿಗೆ ಸರ್ಕಾರ ಸ್ಪಂದಿಸುವಂತೆ ಇಡೀ ವಿಧಾನಸಭೆಯನ್ನು 4-5 ಶಾಸಕರು ನಿಯಂತ್ರಿಸಲಿದ್ದಾರೆ ಎಂದರು. ಜನಪ್ರತಿನಿಧಿಗಳು ಜನರ ಮಧ್ಯೆ ಇದ್ದು ಸೇವೆ ಮಾಡಬೇಕು. ಭ್ರಷ್ಟಾಚಾರ ಎಸಗುವ ಶಾಸಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಬಡಬಗ್ಗರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಆದ್ದರಿಂದ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ರಾಹುಲ್ ಗಾಂಧಿ ವಿನಂತಿಸಿದರು.
ರಾಜಕೀಯಕ್ಕೆ ಬನ್ನಿ: ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾದರೆ ಯುವಕರು, ಮಹಿಳೆಯರು ಹೆಚ್ಚು ಈ ಕ್ಷೇತ್ರಕ್ಕೆ ಬರುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ಅವರು, ರಾಜಕೀಯ ವ್ಯವಸ್ಥೆಗೆ ಹೊಸ ಆಯಾಮ ನೀಡಲು ಮುಂದೆ ಬರುವ ಯುವಕರಿಗೆ ಕಾಂಗ್ರೆಸ್ ಬಾಗಿಲು ತೆರೆದಿದೆ. ಕೇವಲ ರಾಜ್ಯದಲ್ಲಿ ಸರ್ಕಾರ ಬದಲು ಮಾಡುವುದು ಮುಖ್ಯವಾಗಿಲ್ಲ. ವ್ಯವಸ್ಥೆ ಬದಲಾಯಿಸುವುದೂ ಅಷ್ಟೇ ಅಗತ್ಯ. ಬಡವರ ಏಳಿಗೆಗೆ ಅನುಕೂಲಕರವಾದ ಕಾನೂನುಗಳನ್ನು ಜಾರಿಗೆ ತರುವುದು ಕಾಂಗ್ರೆಸ್‌ನ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಾ ಜಿ. ಪರಮೇಶ್ವರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ರು. 1 ಕೆಜೆಯಂತೆ 30 ಕೆಜಿ ಅಕ್ಕಿ ವಿತರಿಸಲಾಗುವುದು. ರೈತ ಕುಟುಂಬಗಳು ಆರ್ಥಿಕವಾಗಿ ಸಬಲವಾಗಲು ಹಾಲಿನ ಸಬ್ಸಿಡಿ ದರವನ್ನು ರು. 2ರಿಂದ 4ಕ್ಕೆ ಹೆಚ್ಚಿಸಲಾಗುವುದು ಎಂದರು. 2009ರಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ಲಕ್ಷಾಂತರ ಜನರು ಆಸ್ತಿ-ಪಾಸ್ತಿ ಕಳೆದುಕೊಂಡು ಕಂಗಾಲಾಗಿದ್ದರೂ ಬಿಜೆಪಿ ಸರ್ಕಾರ ಅವರ ನೆರವಿಗೆ ಧಾವಿಸಲಿಲ್ಲ. ನೆರೆ ಹಾವಳಿಯಿಂದ ಜನಸಾಮಾನ್ಯರು ಪಡುತ್ತಿದ್ದ ನರಕಯಾತನೆಗೆ ಪರಿಹಾರ ಕಲ್ಪಿಸಿಕೊಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಡಾ ಮನಮೋಹನ ಸಿಂಗ್ ಹಾಗೂ ಚಿದಂಬರಂ ಅವರು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರಲ್ಲದೆ, ರು. 1,680 ಕೋಟಿ ಪರಿಹಾರ ರೂಪದಲ್ಲಿ ವಿತರಿಸಿದ್ದರು. ಈ ಅನುದಾನದ ಉಪಯೋಗವೂ ಸಮರ್ಪಕವಾಗಿಲ್ಲ. ನೀರಾವರಿ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಪ್ರಯತ್ನಿಸಿಲ್ಲ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ತಿಲಾಂಜಲಿ ಹಾಡಲು ಕಾಂಗ್ರೆಸ್‌ಗೆ ಬೆಂಬಲಿಸುವಂತೆ ಪರಮೇಶ್ವರ ಕೋರಿದರು.
ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಸಂಸದ ಸಂಜಯ ನಿರೂಪಮ್, ರೇಲ್ವೆ ಸಚಿವ ಸೂರ್ಯನಾರಾಯಣ ರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಎಚ್.ಕೆ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.