ಕೆಜೆಪಿ ತುರುಸಿನ ಪ್ರಚಾರ
ಹಾವೇರಿ: ನೂರಾರು ಕಾರ್ಯಕರ್ತರು, ಅಪಾರ ಅಭಿಮಾನಿಗಳು ಹಾಗೂ ಹಿತೈಷಿಗಳೊಂದಿಗೆ ಹಾವೇರಿ ಮೀಸಲು ವಿಧಾನಸಭೆ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ನೆಹರು ಓಲೇಕಾರ, ಮಂಗಳವಾರ ಕ್ಷೇತ್ರದಲ್ಲಿ ತುರುಸಿನ ಪ್ರಚಾರ ನಡೆಸಿದರು.
ಪಾದಯಾತ್ರೆಯ ಮೂಲಕ ಮನೆ-ಮನೆಗೆ ತೆರಳಿದ ಓಲೇಕಾರ, ಕೆಜೆಪಿಗೆ ಮತ ನೀಡುವ ಮೂಲಕ ಜಿಲ್ಲೆಯಾದ್ಯಂತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆರಂಭಿಸಿರುವ ಅಭಿವೃದ್ಧಿ ಕಾರ್ಯಗಳು ಮುಂದುವರೆಸಲು ತಮ್ಮ ಕೈ ಬಲಪಡಿಸುವಂತೆ ವಿನಂತಿಸಿಕೊಂಡರು. ಕಳೆದ ಬಾರಿ ಚುನಾವಣೆಯಲ್ಲಿ ಕೈ ಹಿಡಿದಿದ್ದ ಮತದಾರ ಪ್ರಸಕ್ತ ಚುನಾವಣೆಯಲ್ಲಿಯೂ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ ಮತ್ತೊಮ್ಮೆ ಸೇವೆಗೆ ಅವಕಾಶ ಮಾಡಿಕೊಡಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದೂ ಅವರ ಹೇಳಿಕೊಂಡರು. ಕಳಸೂರು, ಬೈಲಮಾದಾಪುರ, ಹೊಸರಿತ್ತಿ, ಹಳೆರಿತ್ತಿ, ಹಾಲಗಿ, ಗುಡಿಸಲುಕೊಪ್ಪ ಸೇರಿದಂತೆ 12 ಹಳ್ಳಿಗಳಲ್ಲಿ ಓಲೇಕಾರ ಪ್ರಚಾರ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಮತದಾರರು, ಪ್ರಸಕ್ತ ಚುನಾವಣೆಯಲ್ಲಿ ಅಭೂತ ಪೂರ್ವ ಅಂತರದಿಂದ ಗೆಲುವು ತಂದುಕೊಡಲು ಶ್ರಮಿಸುವುದಾಗಿ ಇದೇ ಸಂದರ್ಭದಲ್ಲಿ ಅಭ್ಯರ್ಥಿ ಓಲೇಕಾರ ಅವರಿಗೆ ಅಭಯ ನೀಡಿದರು. ಚನ್ನಬಸಪ್ಪ ಅರಳಿ, ಬಸವರಾಜ ಕಂಬಳಿ, ಅನಿತಾ ಸುಬ್ರಮಣ್ಯ, ಸುರೇಶ ಹೊಸಮನಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.