ದಾಖಲೆ ಬಹುಮತದಿಂದ ಉದಾಸಿಗೆ ಜಯ
ನೀರಾವರಿ ಶಿಕ್ಷಣಕ್ಕೆ ಆದ್ಯತೆ ನೀಡಿ ಜನತೆಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಫಲವಾಗಿರುವ ಮಾಜಿ ಸಚಿವ ಸಿ.ಎಂ. ಉದಾಸಿ...
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಏ. 27
ನೀರಾವರಿ ಶಿಕ್ಷಣಕ್ಕೆ ಆದ್ಯತೆ ನೀಡಿ ಜನತೆಯ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಸಫಲವಾಗಿರುವ ಮಾಜಿ ಸಚಿವ ಸಿ.ಎಂ. ಉದಾಸಿ ಅವರು ದಾಖಲೆ ಬಹುಮತದಿಂದ ಆಯ್ಕೆಯಾಗಲಿದ್ದು, ಹಾನಗಲ್ಲ ತಾಲೂಕಿನ ಉತ್ತರ ಭಾಗದ ನೀರಾವರಿಗೂ ಆದ್ಯತೆ ನೀಡುತ್ತಿದ್ದಾರೆ ಎಂದು ಜಿಪಂ ಸದಸ್ಯ, ಕೆಜೆಪಿ ಮುಖಂಡ ಪದ್ಮನಾಭ ಕುಂದಾಪುರ ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮಾತನಾಡಿದ ಅವರು, ಮಾಜಿ ಸಚಿವ ಸಿ.ಎಂ. ಉದಾಸಿ ಒಂದು ಶಕ್ತಿ. ರಾಜಕೀಯ ಇತಿಹಾಸದಲ್ಲಿ ಕ್ರಿಯಾಶೀಲತೆ ಮೂಲಕ ರಾಜಕೀಯ ಅಸ್ತಿತ್ವ ಉಳಿಸಿಕೊಂಡ ಅವರು, ರಾಜ್ಯದಲ್ಲಿ ಉದಾಸಿ ಅವರೇ ಒಂದು ಪಕ್ಷವಾಗಿ ಕೆಲಸ ಮಾಡುವ ಶಕ್ತಿ ಉಳ್ಳವರು ಎಂದರು.
ಉದಾಸಿ ಅವರಿಗೆ ಯಾವ ಪಕ್ಷ ಎಂಬುದು ಮುಖ್ಯವಲ್ಲ. ಅಭಿವೃದ್ದಿಯೇ ಅವರ ಜೀವನ ವಿಧಾನ. ಕಾರ್ಯಕರ್ತರನ್ನು ಸಾಮಾಜಿಕ ನ್ಯಾಯ, ಸಾಮಾಜಿಕ ಕಳಕಳಿಗಾಗಿ ತರಬೇತುಗೊಳಿಸುವ ಶ್ರದ್ಧೆಯ ನಾಯಕರಾಗಿದ್ದಾರೆ ಎಂದರು.
ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಆರ್. ಪಾಟೀಲ, ನಾಯಕರಾದ ಹನುಮಂತಪ್ಪ ತುಮರಿಕೊಪ್ಪ, ಜಿ.ಎಂ. ಅಪ್ಪಾಜಿ, ಗೂಡೂಸಾಬ ಹನಕನಹಳ್ಳಿ, ಬಸವರಾಜ ಬೂದಿಹಾಳ, ರಾಮಸಿಂಗ ರಜಪೂತ, ಬಸವರಾಜ ಹುಲಗೂರ, ಚನ್ನಬಸಪ್ಪ ಬೈಲವಾಳ, ಶಿವನಗೌಡ್ರ ಪಾಟೀಲ, ಸಿ.ಬಿ. ಪಾಟೀಲ, ನಿಂಗಪ್ಪ ಮುದಕಣ್ಣನವರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.
ಇದೇ ಸಂದರ್ಭ ಬೊಮ್ಮನಹಳ್ಳಿಯ ಕಾಂಗ್ರೆಸ್ ನಾಯಕ ಶೇಕಪ್ಪ ಕ್ಯಾಲಕೊಂಡ ಅವರು ಹನುಮಂತಪ್ಪ ತುರಿಕೊಪ್ಪ, ಪದ್ಮನಾಭ ಕುಂದಾಪುರ, ಎಂ.ಆರ್. ಪಾಟೀಲ ನೇತೃತ್ವದಲ್ಲಿ ಕೆಜೆಪಿ ಸೇರಿದರು.