ಬಿಜೆಪಿ, ಕೆಜೆಪಿಗೆ ಅಧಿಕಾರ ಕೊಟ್ರೆ ರಾಜ್ಯ ಮಾರ್ತಾರೆ
5 ವರ್ಷ ರಾಜ್ಯಾಡಳಿತ ನಡೆಸಿದ ಬಿಜೆಪಿ, ಕೆಜೆಪಿ ನಾಯಕರ ಕೈಗೆ ಮತ್ತೊಮ್ಮೆ ಅಧಿಕಾರ ನೀಡಿದರೆ ರಾಜ್ಯದ ಖನಿಜ ಸಂಪತ್ತು, ಸರ್ಕಾರದ...
ರಾಣಿಬೆನ್ನೂರು: 5 ವರ್ಷ ರಾಜ್ಯಾಡಳಿತ ನಡೆಸಿದ ಬಿಜೆಪಿ, ಕೆಜೆಪಿ ನಾಯಕರ ಕೈಗೆ ಮತ್ತೊಮ್ಮೆ ಅಧಿಕಾರ ನೀಡಿದರೆ ರಾಜ್ಯದ ಖನಿಜ ಸಂಪತ್ತು, ಸರ್ಕಾರದ ಹಾಗೂ ಜನರ ಆಸ್ತಿಗಳನ್ನೆಲ್ಲ ತಮ್ಮ ಹೆಂಡತಿ, ಮಕ್ಕಳು, ಬಂಧುಗಳ ಹೆಸರಲ್ಲಿ ಬರೆದುಕೊಂಡು ರಾಜ್ಯವನ್ನು ಮಾರಲೂ ಹೇಸುವವರಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದರು.
ನಗರದ ಯರೇಕುಪ್ಪಿ ರಸ್ತೆಯ ಬೈಲು ಜಾಗೆಯಲ್ಲಿ ಏರ್ಪಡಿಸಿದ್ದ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ಪರ ಮತ ಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ರಸಗೊಬ್ಬರ, ಬಿತ್ತನೆ ಬೀಜಗಳನ್ನು ಕೇಳಿದ ರೈತರ ಮೇಲೆ ಗುಂಡು ಹಾರಿಸಿ ಇಬ್ಬರು ಬಲಿ ತೆಗೆದುಕೊಂಡು ಆಡಳಿತ ನಡೆಸಿತು. ರೈತರ ಶಾಪದಿಂದಾಗಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ ಜೈಲು ಸೇರಿದರು ಎಂದು ಆರೋಪಿಸಿದರು.
ಇಂಥ ಬಿಜೆಪಿಗರಿಗೆ ರೈತರ ಮತಗಳನ್ನು ಕೇಳುವ ಹಕ್ಕಿಲ್ಲ. ಮೇ 5ರಂದು ನಡೆಯಲಿರವ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ, ಕಾಂಗ್ರೆಸ್ನವರಿಗೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ. ಜೆಡಿಎಸ್ ರಾಜ್ಯಾಡಳಿತದ ಚುಕ್ಕಾಣಿ ಹಿಡಿದಲ್ಲಿ ರಾಜ್ಯದಲ್ಲಿ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವೆಂದರಿತ ಮತದಾರರು ಪಕ್ಷಕ್ಕೆ ಮತ ನೀಡಲು ಮುಂದಾಗಿದ್ದಾರೆ ಎಂದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರು, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಿವಿಧ ನಿಗಮ ಆರಂಭಿಸಲಾಗುವುದು. ವಿದ್ಯಾವಂತ ನಿರುದ್ಯೋಗಿಗಳಿಗೆ 'ಯುವಕರಿಗಾಗಿ ಬದುಕು' ಯೋಜನೆಯಡಿ ಆರ್ಥಿಕ ನೆರವು ನೀಡುತ್ತೇವೆ. ಮತದಾರರು ಬಿಜೆಪಿ-ಕೆಜೆಪಿ ಧಿಕ್ಕರಿಸಿ ಜೆಡಿಎಸ್ಗೆ ಮತ ನೀಡಬೇಕೆಂದು ಕುಮಾರಸ್ವಾಮಿ ಮನವಿ ಮಾಡಿದರು.
ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ, ಮಾಜಿ ಸಚಿವ ಬಸವರಾಜ ಹೊರಟ್ಟಿ, ವನಿತಾ ಗುತ್ತಲ, ಡಾ. ಸಂಜಯ ನಾಯ್ಕ, ತಾಲೂಕಾಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ಚನ್ನಮ್ಮ ಗುರುಪಾದದೇವರಮಠ, ಜಿ.ಜಿ. ಹೊಟ್ಟಿಗೌಡ್ರ, ಶೇಖಪ್ಪ ನರಸಗೊಂಡರ, ಎಂ.ಜಿ. ಕಮದೋಡ ಇದ್ದರು.