ರೈತ ವಿರೋಧಿ ಬಿಜೆಪಿ ತಿರಸ್ಕರಿಸಿ: ಸಿದ್ದು
ಕಳೆದ ಐದು ವರ್ಷಗಳ ಕಾಲ ಕುಂಭಕರ್ಣನ ನಿದ್ದೆಯಲ್ಲಿ ಕಾಲ ಕಳೆದ ರೈತ ವಿರೋಧಿ ಸರ್ಕಾರವನ್ನು ಚುನಾವಣೆಯಲ್ಲಿ ತಿರಸ್ಕರಿಸಿ...
ಬ್ಯಾಡಗಿ: ಕಳೆದ ಐದು ವರ್ಷಗಳ ಕಾಲ ಕುಂಭಕರ್ಣನ ನಿದ್ದೆಯಲ್ಲಿ ಕಾಲ ಕಳೆದ ರೈತ ವಿರೋಧಿ ಸರ್ಕಾರವನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಕಾಂಗ್ರೆಸ್‌ನ್ನು ಬೆಂಬಲಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಪಟ್ಟಣದ ಲೈನ್ಸ್ ಶಾಲೆ ಮೈದಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಚುನಾವಣೆ ಪ್ರಚಾರ ಭಾಷಣ ಮಾಡಿದ ಅವರು, ರಾಜ್ಯ ಕೊಳ್ಳೆ ಹೊಡೆದು, ಜೈಲಿಗೆ ಹೋದ ಮಂತ್ರಿಗಳನ್ನು ರಾಜ್ಯವೇ ತಿರಸ್ಕರಿಸಿದೆ. ಅಂತಹವರನ್ನು ಮತ್ತೆ ಚುನಾವಣೆಯ ಸ್ಪರ್ಧಿಯಲ್ಲಿದ್ದಾರೆ. ಮುಲಾಜಿಲ್ಲದೇ ಮನೆಗೆ ಕಳುಹಿಸಿ ಎಂದರು.
ಕೇವಲ ಭ್ರಷ್ಟಾಚಾರ, ಲಂಚ, ಹಗರಣಗಳಲ್ಲಿ ಭಾಗಿಯಾದ ಮಂತ್ರಿಗಳಿಗೆ ಈ ಸಾರಿ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವ ಮೂಲಕ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ರಾಜ್ಯದಲ್ಲಿ ಆಡಳಿತಕ್ಕೆ ತನ್ನಿ ಎಂದರು. ಕಳೆದ ಬಾರಿ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಲಾಗಿಲ್ಲ. ನಿರುದ್ಯೋಗಿ ಯುವಕರಿಗೆ ಭತ್ಯೆ, ವಿದ್ಯುತ್, ರು. 2 ಅಕ್ಕಿ ನೀಡುವ ಭರವಸೆಗಳನ್ನು ಪ್ರಣಾಳಿಕೆಗಳಲ್ಲಿ ಬಿಂಬಿಸಲಾಗಿತ್ತು. ಆದರೆ, ಈಡೇರಿಸದೇ ಮತದಾರರಿಗೆ ಮೋಸ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಸಂಶಯವಿಲ್ಲ ಎಂದರು.
ಮಂಜುನಾಥ ಕುನ್ನೂರು, ಬ್ಯಾಡಗಿ ಅಭ್ಯರ್ಥಿ ಬಸವರಾಜ ಶಿವಣ್ಣನವರ, ಅಜ್ಜಂಪೀರ ಖಾದ್ರಿ, ಎಸ್.ಆರ್. ಪಾಟೀಲ, ವೀಕ್ಷಕ ರುದ್ರರಾಜು, ಬಸವರಾಜ ಸವಣೂರು, ಉಮೇಶ ಬೆಟಗೇರಿ, ಮಹಾದೇವಪ್ಪ ದೇವಿಹೊಸೂರು, ಹುಸೇನಸಾಬ ದೊಡ್ಡಮನಿ, ರೇಖಾ ದೊಡ್ಡಮನಿ, ದಾನಪ್ಪ ಚೂರಿ, ಸುರೇಶಗೌಡ ಪಾಟೀಲ, ಹುಚ್ಚನಗೌಡ ಲಿಂಗನಗೌಡ್ರ, ಹನುಮಗೌಡ ಪಾಟೀಲ, ರುದ್ರಪ್ಪ ಹೊಂಕಣ, ಚನ್ನಬಸಪ್ಪ ಪೂಜಾರ ಇದ್ದರು.