ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಭಿವೃದ್ಧಿಗೆ ಮಣೆ ಹಾಕ್ತಾರಾ ಮತದಾರರು

Lingaraj Badiger
Updated On : 29 Apr 2013, 11:36 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಏ. 28
ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆಯೇ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ರಂಗೇರಿದೆ. ದಿನೇ ದಿನೇ ಪ್ರಚಾರದ ಕಾವಿನ ಜೊತೆಗೆ ಪೈಪೋಟಿಯೂ ಹೆಚ್ಚುತ್ತಾ ಸಾಗಿದೆ. ಬಿಜೆಪಿ ಅಭ್ಯರ್ಥಿ ಸಚಿವ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದರೆ, ವಿರೋಧ ಪಕ್ಷಗಳು ಬಿಜೆಪಿ ಭ್ರಷ್ಟಾಚಾರವನ್ನು ಬಂಡವಾಳವಾಗಿಸಿಕೊಂಡು ಪ್ರಚಾರ ಮಾಡುತ್ತಿವೆ. ಹೀಗಿದ್ದಾಗ ಅಭಿವೃದ್ಧಿ ಕಂಡಿರುವ ಕ್ಷೇತ್ರದಲ್ಲಿ ಮತದಾರರು ಯಾರಿಗೆ ಮಣೆ ಹಾಕುತ್ತಾರೆ? ಎಂಬ ಪ್ರಶ್ನೆ ಉದ್ಭವಿಸಿದೆ.
ನಿಜ, ಶಿಗ್ಗಾಂವಿ ಮತಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಇದಕ್ಕೆ ಬಲವಾದ ಕಾರಣವೂ ಉಂಟು. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಪರಮಾಪ್ತ ಎಂದೆನಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಈ ಕ್ಷೇತ್ರದ ಹುರಿಯಾಳು. ಯಡಿಯೂರಪ್ಪನವರು ಕೆಜೆಪಿ ಹುಟ್ಟು ಹಾಕಿದ ಬೆನ್ನಲ್ಲೇ ಬೊಮ್ಮಾಯಿಯವರೂ ಬಿಜೆಪಿ ತೊರೆದು ಕೆಜೆಪಿಗೆ ವಲಸೆ ಹೋಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬೊಮ್ಮಾಯಿ ಬಿಜೆಪಿಯಲ್ಲಿಯೇ ಉಳಿದುಕೊಂಡಿದ್ದಾರೆ. ಬಿಜೆಪಿ ತೊರೆಯದೇ ಇರುವುದರಿಂದ ಜಯದ ಹಾದಿ ಸುಗಮವಾಗಲಿದೆ ಎಂಬ ಲೆಕ್ಕಾಚಾರ ಬೊಮ್ಮಾಯಿಯವರದ್ದಾಗಿರಬೇಕು ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಅಭಿವೃದ್ಧಿ ಮಂತ್ರ: ಅಂದ ಹಾಗೆ, ಶಿಗ್ಗಾಂವಿ ಮಾದರಿ ಕ್ಷೇತ್ರ ಎಂದು ಹೇಳಿಕೊಳ್ಳುವಲ್ಲಿ ಎರಡು ಮಾತಿಲ್ಲ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಕಾಣಬಹುದಾಗಿದೆ. ತಾವು ಮಾಡಿರುವ ಅಭಿವೃದ್ಧಿಯನ್ನೇ ಮಂತ್ರವಾಗಿಸಿಕೊಂಡು ಬೊಮ್ಮಾಯಿ ಮತ ಯಾಚಿಸುತ್ತಿದ್ದಾರೆ. ಅಭಿವೃದ್ಧಿ ಎಂಬ ಬಾಣಗಳು ತಮ್ಮ ಬತ್ತಳಿಕೆಯಲ್ಲಿರುವಾಗ ಸೋಲಿನ ಭಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.  ಕಳೆದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರವಾಗಲಿವೆ ಎಂಬ ಮಾತು ಮತದಾರರಿಂದ ಕೇಳಿಬರುತ್ತಿವೆ. ಕಳೆದ ಅವಧಿಯಲ್ಲಿಯೂ ಬಿಜೆಪಿ ಅಭ್ಯರ್ಥಿಯಾಗಿಯೇ ವಿಧಾನಸಭೆ ಪ್ರವೇಶಿಸಿದ್ದ ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ ಕ್ಷೇತ್ರದಾದ್ಯಂತ ಹತ್ತು ಹಲವು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದಾರೆಂದಾರೆ. ದೇಶದಲ್ಲಿ ಪ್ರಥಮ ಎಂಬ ಖ್ಯಾತಿಗೆ ಭಾಜನವಾದ ಶಿಗ್ಗಾಂವಿ ತುಂತುರು ನೀರಾವರಿ ಯೋಜನೆ ಸಮರ್ಪಣೆಯಿಂದ ಶಿಗ್ಗಾಂವಿ-ಸವಣೂರು ಮತ್ತು ಹಾನಗಲ್ಲ ತಾಲೂಕಿನ ಸುಮಾರು 25ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿದಂತಾಗಿದೆ. ಈ ಯೋಜನೆಯ ಜೊತೆ ಜೊತೆಗೆ ಎರಡನೇ ಹಂತದ ಯೋಜನೆಯಾಗಿ ನೀರಾವರಿ ಸೌಲಭ್ಯವನ್ನು ಸವಣೂರಿಗೂ ವಿಸ್ತರಿಸುವ ಪ್ರಸ್ತಾಪಕ್ಕೆ ಕೊನೆಯ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಸಂಪೂರ್ಣ ಶಿಗ್ಗಾಂವಿ-ಸವಣೂರು ತಾಲೂಕು ಸೇರಿದಂತೆ ಶಿರಹಟ್ಟಿ ತಾಲೂಕಿನ ಕೆಲ ಗ್ರಾಮದ ರೈತರು ನೀರಾವರಿ ಸೌಲಭ್ಯ ಪಡೆಯಲು ಕೆಲವೇ ದಿನ ಬಾಕಿ ಇದೆಯಷ್ಟೇ. ನೀರಾವರಿ ಸೌಲಭ್ಯದಿಂದ ವ್ಯವಹಾರದ ವಹಿವಾಟು ಹೆಚ್ಚಿಸಿಕೊಂಡ ಶಿಗ್ಗಾಂವಿ-ಸವಣೂರು ಮತ್ತು ಬಂಕಾಪುರ ಪಟ್ಟಣಗಳು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿವೆ.
ರಸ್ತೆ, ಕುಡಿಯುವ ನೀರು, ಶೈಕ್ಷಣಿಕ ವ್ಯವಸ್ಥೆ, ಆಸ್ಪತ್ರೆಗಳಿಗೆ ಹೈಟೆಕ್ ವ್ಯವಸ್ಥೆ, ವಿಶ್ವದಲ್ಲಿಯೇ ಮೊಟ್ಟ ಮೊದಲು ಎಂಬ ಖ್ಯಾತಿಗೆ ಒಳಗಾಗಿರುವ ಜಾನಪದ ವಿಶ್ವ ವಿದ್ಯಾಲಯ, ಬಾಡದಲ್ಲಿನ ಕನಕ ಪೀಠದಂತಹ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಾಗಿವೆ.
ಮತದಾರರರು ಮಣೆ ಹಾಕ್ತಾರಾ?: ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಬೊಮ್ಮಾಯಿ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ ನಿಜ. ಆದರೆ ಈ ಅಭಿವೃದ್ಧಿ ಕಾರ್ಯಗಳು ಮತಗಳಾಗಿ ಪರಿವರ್ತನೆಗೊಳ್ಳುತ್ತವೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮತದಾರರು ಅಭಿವೃದ್ಧಿಗೆ ಮಣೆ ಹಾಕಿದ್ದೇ ಆದಲ್ಲಿ ಬೊಮ್ಮಾಯಿ ದಾರಿ ಸುಗಮವಾಗಲಿದೆ. ಒಂದು ವೇಳೆ ಅಭಿವೃದ್ಧಿ ಬಿಟ್ಟು ಜಾತಿ ಇನ್ನಿತರ ಲೆಕ್ಕಾಚಾರಕ್ಕೆ ಆದ್ಯತೆ ನೀಡಿದ್ದೇ ಗೆಲುವಿನ ಹಾದಿ ದುರ್ಗಮವಾದೀತು. ಇನ್ನು ಬೊಮ್ಮಾಯಿ ವಿರುದ್ಧದ ಅಭ್ಯರ್ಥಿಗಳು ಅಷ್ಟೇನೂ ಸಮರ್ಥರಲ್ಲ ಎಂದು ಜನ ಆಡಿಕೊಳ್ಳುತ್ತಿರುವ ಮಧ್ಯೆಯೇ ಕಾಂಗ್ರೆಸ್‌ನ ಅಜ್ಜಂಪೀರ ಖಾದ್ರಿಯವರು ಬೊಮ್ಮಾಯಿಗೆ ಎದುರಾಳಿಯಾಗಿದ್ದಾರೆ. ಖಾದ್ರಿಯವರ ಬತ್ತಳಿಕೆಯಲ್ಲಿ ಬೊಮ್ಮಾಯಿವರ ವಿರುದ್ಧ ಮಾತನಾಡಲು ಅಂತಹ ವಿಷಯಗಳೇನೂ ಇಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯವಾಗಿಲ್ಲ ಎಂದರೆ ಜನ ನಂಬಲ್ಲ.  ಇದಕ್ಕಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಅಧಿಕಾರಾವಧಿಯಲ್ಲಾಗಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಚುನಾವಣೆಯ ಅಸ್ತ್ರವಾಗಿಸಿಕೊಂಡಿದ್ದಾರೆ. ಆದರೆ ಅಭಿವೃದ್ಧಿ ಹಾಗೂ ಆರೋಪದ ಹಗ್ಗ ಜಗ್ಗಾಟದಲ್ಲಿ ಅಭಿವೃದ್ಧಿಯೇ ಒಂದು ಕೈ ಮುಂದಿದೆ ಎಂಬುದು ಜನಾಭಿಮತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement