ಪಕ್ಷ ತೊರೆದವರೇ ಬೆನ್ನಿಗೆ ಚೂರಿ ಹಾಕಿದ್ರು
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಏ. 30
ಪಕ್ಷನಿಷ್ಠೆ ತೋರಿರುವ ಬೊಮ್ಮಾಯಿ ಅವರ ವಿರುದ್ಧ ಹಗುರವಾಗಿ ಮಾತನಾಡಿದವರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳುವ ಮೂಲಕ, ಹೆಸರು ಪ್ರಸ್ತಾಪಿಸದೆ ಮಾಜಿ ಸಿಎಂ ಬಿಎಸ್ವೈ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಬಂಕಾಪುರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪ್ರಚಾರಾರ್ಥ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪಕ್ಷ ತೊರೆದವರಿಂದ ಬೆನ್ನಿಗೆ ಚೂರಿ: ಬೊಮ್ಮಾಯಿ ಪಕ್ಷನಿಷ್ಠೆ ತೋರುವ ಮೂಲಕ ಹೆತ್ತ ತಾಯಿಯನ್ನು ಪ್ರೀತಿಸಿದ್ದಾರೆ. ಬಿಜೆಪಿ ಹೆತ್ತ ತಾಯಿ, ಮೋಸ ಮಾಡಬೇಡಿ, ದ್ರೋಹ ಬಗೆಯಬೇಡಿ ಎಂದು ಹೇಳಿದವರೆ ತಾಯಿಗೆ (ಬಿಜೆಪಿ) ಬೆನ್ನಿಗೆ ಚೂರಿ ಹಾಕಿ ಇದೀಗ ಹೊಸ ಪಕ್ಷಕಟ್ಟಿ ಬೊಮ್ಮಾಯಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪ ಸರಿಯಲ್ಲ: ಬಿಜೆಪಿಗೆ ಚೂರಿ ಹಾಕಿದ್ದನ್ನು ಆತ್ಮಸಾಕ್ಷಿಯಾಗಿ ಒಪ್ಪಿಕೊಳ್ಳಲಿ. ಪಕ್ಷಕ್ಕೆ ಕಾರ್ಯಕರ್ತರು ಕೃಷ್ಣ ಇದ್ದಂತೆ. ಕಾರ್ಯಕರ್ತರ ಹಾಗೂ ಕ್ಷೇತ್ರದ ಅಭಿವೃದ್ಧಿಗೋಸ್ಕರ ಬೊಮ್ಮಾಯಿ ಬಿಜೆಪಿಯಲ್ಲಿದ್ದಾರೆ ಎಂದೂ ಜೋಶಿ ಸಮರ್ಥಿಸಿಕೊಂಡರು. ಬೊಮ್ಮಾಯಿ ಅವರನ್ನು ಅಭಿವೃದ್ಧಿ ಹರಿಕಾರರು ಎಂದು ಬಣ್ಣಿಸಿದವರೇ ಇದೀಗ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ನೀತಿ ಪಾಠ ಹೇಳಿಕೊಟ್ಟವರೇ ಬಿಜೆಪಿಗೆ ದ್ರೋಹ ಮಾಡಿದ್ದಾರೆ. ದೇವರು ಎಂದಿಗೂ ಅವರನ್ನು ಸಹಿಸುವುದಿಲ್ಲ. ಕ್ಷೇತ್ರದ ಮತದಾರರು ಅವರ ಮಾತಿಗೆ ಮನ್ನಣೆ ನೀಡುವುದಿಲ್ಲ ಎಂಬ ವಿಶ್ವಾಸ ತಮಗಿದೆ ಎಂದರು.
ಲಕ್ಷಾಂತರ ರು. ಲೂಟಿ: ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ ಖಾದ್ರಿ ಶಾಸಕರಾಗಿದ್ದ ಸಂದರ್ಭ ಕೂಲಿಗಾಗಿ ಕಾಳು ಯೋಜನೆ ಅಡಿಯಲ್ಲಿ ಬಂದಿದ್ದ ಆಹಾರ ಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಲಕ್ಷಾಂತರ ರು. ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕೂಲಿಗಾಗಿ ಕಾಳು ಯೋಜನೆ ಹಾಗೂ ಮೇವು ಹಗರಣದಲ್ಲಿ ಕೋಟ್ಯಂತರ ರು. ನುಂಗಿರುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮೇಲೆ ಭ್ರಷ್ಟಾಚಾರ ಮಾಡುವ ನೈತಿಕ ಹಕ್ಕಿಲ್ಲ ಎಂದು ಆಕ್ರೋಶದಿಂದ ನುಡಿದರು. ಅಜ್ಜಂಪೀರ ಶಾಸಕರಾಗಿದ್ದ ಸಂದರ್ಭ ಕ್ಷೇತ್ರದ ಅಭಿವೃದ್ಧಿಗೆ ಮಾಡಿರುವುದಾದರೂ ಏನು ಎಂದು ಖಾರವಾಗಿ ನುಡಿದ ಜೋಶಿ, ಬೊಮ್ಮಾಯಿ ಶಾಸಕರಾದ ನಂತರ 50 ವರ್ಷದ ಅವಧಿಯಲ್ಲಿ ಆಗದಿರುವ ಅಭಿವೃದ್ಧಿ ಕಾರ್ಯಗಳನ್ನು 5 ವರ್ಷಗಳಲ್ಲಿ ಮಾಡಿದ್ದಾರೆ ಎಂದರು.
ಅಭಿವೃದ್ಧಿಗೆ ಶ್ರಮಿಸಿದ ಬೊಮ್ಮಾಯಿ: ಕ್ಷೇತ್ರದಲ್ಲಿ 680 ಕಿಮೀ ರಸ್ತೆ ಅಭಿವೃದ್ಧಿ, ಬಂಕಾಪುರ, ಶಿಗ್ಗಾಂವಿ ಮತ್ತು ಸವಣೂರು ತಾಲೂಕಿನಲ್ಲಿ ತಾಂತ್ರಿಕ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಹಿಂದುಳಿದ ಕ್ಷೇತ್ರವನ್ನು ಅಭಿವೃದ್ಧಿ ಸಾಲಿನಲ್ಲಿ ತಂದು ನಿಲ್ಲಿಸಿದ್ದ ಕೀರ್ತಿ ಬೊಮ್ಮಾಯಿ ಅವರಿಗೆ ಸಲ್ಲುತ್ತಿದ್ದು, ಬಿಜೆಪಿ ಅವಧಿಯಲ್ಲಿ ಆಗಿರುವ ಕೆಲಸ ಕಾರ್ಯಗಳನ್ನು ನೋಡಿ ಬೊಮ್ಮಾಯಿ ಅವರನ್ನು ಬೆಂಬಲಿಸಿ ಎಂದು ವಿನಂತಿಸಿದರು.
ಭಸ್ಮಾಸುರನ ಹಸ್ತ: ಕೇಂದ್ರದ ನಾಯಕರು ಕೈ ಚಿಹ್ನೆ ಬಡವರ ಹಸ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಇದು ಬಡವರ ಅನುಕೂಲಕ್ಕೆ ಎಂದಿಗೂ ಬಾರದೆ ಭಸ್ಮಾಸುರ ಹಸ್ತವಾಗಿ ಮಾರ್ಪಟ್ಟಿದೆ. 2ಜಿ ಸ್ಪೆಕ್ಟ್ರಮ್, ಕಲ್ಲಿದ್ದಲು, ತರಂಗಾತರಗಳಲ್ಲಿ ಸಹಸ್ರಾರು ಕೋಟಿ ರು.ಗಳ ಹಗರಣ ನೀಡಿದ ಶ್ರೇಯ ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಆರೋಪಿಸಿದರು. ರು. 66 ಸಾವಿರ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ಸರ್ಕಾರ, ಇದರಲ್ಲಿ 30 ಸಾವಿರ ಕೋಟಿ ಲೂಟಿ ಮಾಡಿದೆ. ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್ನಿಂದ ಎಂದು ಜೋಶಿ ದೋಷಿಸಿದರು. ವಿಪ ಸದಸ್ಯ ಸೋಮಣ್ಣ ಬೇವಿನಮರದ, ಪ್ರಸಕ್ತ ಚುನಾವಣೆಯಲ್ಲಿ ಬೊಮ್ಮಾಯಿ ಅವರಿಗೆ 20 ಸಾವಿರ ಮತಗಳ ಅಂತರದಿಂದ ಗೆಲವು ತಂದುಕೊಡುವ ಮೂಲಕ ಜಾತಿ ಆಧಾರದ ಮೇಲೆ ಚುನಾವಣೆ ಎದುರಿಸಲು ಸಿದ್ಧವಾಗಿರುವ ಕಾಂಗ್ರೆಸ್ಗೆ ತಕ್ಕಪಾಠ ಕಲಿಸಬೇಕೆಂದರು.
ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಬಿಜೆಪಿಗೆ ಬೆಂಬಲಿಸುವಂತೆ ವಿನಂತಿಸಿಕೊಂಡ ಬೇವಿನಮರದ, ಬೊಮ್ಮಾಯಿ ಅವರ ಬಗ್ಗೆ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಮತದಾರರು ನಂಬುವುದಿಲ್ಲ ಎಂದರು. ಯುವಮೋರ್ಚಾ ಅಧ್ಯಕ್ಷ ಬಸವರಾಜ ನಾರಾಯಣಪುರ, ಪುರಸಭೆ ಸದಸ್ಯ ಹೊನ್ನಪ್ಪ ಹೂಗಾರ, ಮಹೇಶ ಕೋತಂಬ್ರಿ, ಚನ್ನಪ್ಪ ಹಳವಳ್ಳಿ, ಸಂಗಪ್ಪ ಹರವಿ, ಮಾಲತೇಶ ಬಾಬುಸಿಂಗ್ನವರ, ಎನ್.ವಿ. ಪದ್ಮಾ, ಎಸ್.ಎಸ್. ಬೆಟಗೇರಿ, ಅಶೋಕ ಪಟ್ಟಣಶೆಟ್ಟರ, ಎಸ್.ಬಿ. ಹಂಡೆ, ಅಯೂಬ್ ಪಠಾಣ, ಎಸ್.ಕೆ. ಸಕ್ರಿ, ಯಲ್ಲಪ್ಪ ಸುಂಕದ, ವಿ.ಡಿ. ರಾಯಣ್ಣನವರ, ರಾಘವೇಂದ್ರ ಮೇಲಗೇರಿ ಪಾಲ್ಗೊಂಡಿದ್ದರು.