ಇಕ್ಕಟ್ಟಿಗೆ ಸಿಲುಕಿಸಿದ ಸಮವಸ್ತ್ರ ಸುತ್ತೋಲೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 1
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಇದೀಗ ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೈಮಗ್ಗಗಳಿಂದ ದೊಡ್ಡ ಪ್ರಮಾಣದಲ್ಲಿ ಬಟ್ಟೆ ಖರೀದಿಸಿ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಈವರೆಗೂ ಸರ್ಕಾರವೇ ಸಮವಸ್ತ್ರ ವಿತರಿಸುತ್ತ ಬಂದಿದೆ. ಆದರೆ, ಶೈಕ್ಷಣಿಕ ವರ್ಷದಲ್ಲಿ ಈ ಜವಾಬ್ದಾರಿಯನ್ನು ಆಯಾ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರ ಹೆಗಲಿಗೆ ಹೊರಿಸಿದ್ದು ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರಿಗೆ ಹೊರೆಯಾಗಿ ಪರಿಣಮಿಸಿದೆ.
ಹೊರೆ ಹೇಗೆ..?: ಸರ್ಕಾರ ಈಗಾಗಲೇ ವಿದ್ಯಾರ್ಥಿಗಳಿಗೆ ಒಂದು ಜತೆ ಸಮವಸ್ತ್ರ ವಿತರಿಸಿದೆ. ಮತ್ತೊಂದು ಜತೆ ಸಮವಸ್ತ್ರ ವಿತರಿಸಬೇಕಿದ್ದು, ಈ ಕಾರ್ಯವನ್ನು ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು ನಿರ್ವಹಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.
ಆದೇಶದನ್ವಯ ಪ್ರತಿ ವಿದ್ಯಾರ್ಥಿಗೆ ಸಮವಸ್ತ್ರ ಹೊಲಿಸಲು ಸರ್ಕಾರ, ಎಸ್ಡಿಎಂಸಿ ಖಾತೆಗೆ ರು. 200 ಜಮಾ ಮಾಡುತ್ತಿದೆ. ಅಲ್ಲದೇ, ಆಗಸ್ಟ್ 20ರೊಳಗಾಗಿ ಬಟ್ಟೆ ಖರೀದಿಸಿ ಸ್ತ್ರೀಶಕ್ತಿ ಸಂಘಗಳ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ದರ್ಜಿಗಳಿಂದ ಹೊಲಿಸಿ ಸೆ. 3ರೊಳಗಾಗಿ ಸಮವಸ್ತ್ರ ವಿತರಿಸಿ ಇಲಾಖೆಗೆ ವರದಿ ಒಪ್ಪಿಸುವಂತೆಯೂ ಸರ್ಕಾರ ಆದೇಶದಲ್ಲಿ ಸೂಚಿಸಿದೆ.
ಜಿಲ್ಲೆಯಲ್ಲಿ ವಿದ್ಯಾರ್ಥಿಗಳೆಷ್ಟು..?: ಒಂದರಿಂದ ಎಂಟನೆ ತರಗತಿ ಓದುತ್ತಿರುವ 1,24781 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸಬೇಕಿದೆ. ನಿಗದಿತ ಅವಧಿಯಲ್ಲಿ ಸಮವಸ್ತ್ರ ವಿತರಿಸದಿದ್ದಲ್ಲಿ ಆಯಾ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಎಷ್ಟು ದರ..?: 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ರು. 97.19 ಹಾಗೂ ವಿದ್ಯಾರ್ಥಿನಿಯರಿಗೆ ರು. 124.81 ವ್ಯಯಿಸಿ ಬಟ್ಟೆ ಖರೀದಿಸಬೇಕು. 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳಿಗೆ ರು. 106.49, ವಿದ್ಯಾರ್ಥಿನಿಯರಿಗೆ ರು. 142.32, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ರು. 120.34, ವಿದ್ಯಾರ್ಥಿನಿಯರಿಗೆ ರು. 184.24 ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ರು. 194.28, ವಿದ್ಯಾರ್ಥಿನಿಯರಿಗೆ ರು. 196.45 ನಿಗದಿಪಡಿಸಲಾಗಿದೆ.
ಸರ್ಕಾರ ನಿಗದಿಪಡಿಸಿದ ದರದಲ್ಲಿ ಬಟ್ಟೆ ಖರೀದಿಸಿ ವಿತರಿಸುವುದು ಅಸಾಧ್ಯದ ಮಾತಾಗಿದೆ. ಒಬ್ಬ ವಿದ್ಯಾರ್ಥಿಗೆ ಬಟ್ಟೆ ಖರೀದಿಸಲು ಕನಿಷ್ಠ ಪಕ್ಷ ರು. 300 ಆದರೂ ಬೇಕು. ಹೊಲಿಗೆಗೆ ರು. 100 ಆದರೂ ಬೇಕಾಗುತ್ತದೆ. ಸರ್ಕಾರ ಯಾವ ದೃಷ್ಟಿಕೋನದಿಂದ ಈ ದರ ನಿಗದಪಡಿಸಿದೆಯೋ ಗೊತ್ತಿಲ್ಲ ಎಂದು ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು ಆಂತಕ ವ್ಯಕ್ತಪಡಿಸುತ್ತಿದ್ದಾರೆ.
ಆದೇಶದಿಂದ ತಲೆಬಿಸಿ: ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರ ತಲೆಬಿಸಿ ಮಾಡಿದ್ದಂತೂ ಸುಳ್ಳಲ್ಲ. ಸರ್ಕಾರದ ಆದೇಶ ಪಾಲಿಸಿದರೆ ಒಂದು ಪಾಲಿಸದಿದ್ದರೆ ಮತ್ತೊಂದು ರೀತಿಯ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಳ್ಳುತ್ತೇವೆ ಎಂದು ಆತಂಕ ವ್ಯಕ್ತಪಡಿಸುವಂತಾಗಿದೆ. ವಿದ್ಯಾರ್ಥಿಗಳ ಬಟ್ಟೆ ಖರೀದಿಸಿ ವಿತರಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿದ ಮೊತ್ತವನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ಈ ಬಾರಿಯೂ ತಾನೇ ಸಮವಸ್ತ್ರ ವಿತರಿಸಲು ಮುಂದಾಗುವ ಮೂಲಕ ಮುಖ್ಯಶಿಕ್ಷಕ ಹಾಗೂ ಎಸ್ಡಿಎಂಸಿ ಸದಸ್ಯರಿಗೆ ಅನುಕೂಲ ಕಲ್ಪಿಸಿಕೊಡುವುದೇ?
ಸರ್ಕಾರದ ಅವೈಜ್ಞಾನಿಕ ಆದೇಶ
ರು. 200ರಲ್ಲಿ ವಿದ್ಯಾರ್ಥಿಗಳ ಸಮವಸ್ತ್ರದ ಬಟ್ಟೆ ಖರೀದಿಸಿ ಹೊಲಿಸಿ ವಿತರಿಸಬೇಕೆಂಬ ಸರ್ಕಾರದ ಆದೇಶ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಕನ್ನಡಪ್ರಭದೊಂದಿಗೆ ಮಾತನಾಡಿ ಜಿಪಂ ಸದಸ್ಯ ರಾಜೇಂದ್ರ ಹಾವೇರಣ್ಣವರ ದೂರಿದ್ದಾರೆ. ಈ ಮೊದಲಿನಂತೆ ಸರ್ಕಾರವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಬೇಕು ಎಂದು ಒತ್ತಾಯಿಸಿದ ಅವರು, ಸರ್ಕಾರ ಸದ್ಯ ನಿಗದಿಪಡಿಸಿರುವ ದರದಲ್ಲಿ ಈ ಮೊದಲು ಬಟ್ಟೆ ಖರೀದಿಸಲು ಸಾಧ್ಯವಾಗುತ್ತಿತ್ತು. ಆದರೆ, ಅದು ಈಗ ಸಾಧ್ಯವಿಲ್ಲ. ಸರ್ಕಾರದ ಆದೇಶ ಪಾಲಿಸಬೇಕಾದರೆ ಮುಖ್ಯಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು ತಮ್ಮ ಕೈಯಾರೆ ಹಣ ವ್ಯಯಿಸಬೇಕಾಗುತ್ತದೆ. ಆದ್ದರಿಂದ ಈ ಆದೇಶವನ್ನು ತಕ್ಷಣಕ್ಕೆ ಹಿಂದಕ್ಕೆ ಪಡೆದು ಮೊದಲಿನಂತೆ ತಾನೇ ಸಮವಸ್ತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹಾವೇರಣ್ಣವರು ಒತ್ತಾಯಿಸಿದರು.
- ಬಿ.ಕೆ. ಮಹೇಂದ್ರ