ಒಂದು ಗಿಡದಿಂದ ಸಾವಿರ ಕೆಜಿ ಆಮ್ಲಜನಕ ಬಿಡುಗಡೆ: ಜಿನೇಂದ್ರ ಪ್ರಸಾದ
ಧಾರವಾಡ: ಬರೀ ಒಂದು ಗಿಡ ಬೆಳೆಸಿದರೆ ಸಾಕು ಒಂದು ಸಾವಿರ ಕೆಜಿ ಆಮ್ಲಜನಕ ಬಿಡುಗಡೆಯಾಗಿ ಅದು 50 ಟನ್ ನೀರು ಹಿಡಿದಿಟ್ಟುಕೊಳ್ಳುತ್ತದೆ ಎಂದು ಎಸ್‌ಡಿಎಂ ಸೊಸೈಟಿ ಕಾರ್ಯದರ್ಶಿ ಕೆ. ಜಿನೇಂದ್ರ ಪ್ರಸಾದ ಹೇಳಿದರು.
ಹು-ಧಾ ಬಿಆರ್‌ಟಿಎಸ್ ಕಂಪನಿಯ ವತಿಯಿಂದ ಎಸ್‌ಡಿಎಂ ದಂತ ಕಾಲೇಜು ಆವರಣದಲ್ಲಿ 8 ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಬಿಆರ್‌ಟಿಎಸ್ ಸಂಸ್ಥೆ ವತಿಯಿಂದ ನೆಟ್ಟ ಸಸಿಗಳನ್ನು ಅತಿ ಜಾಗರೂಕತೆಯಿಂದ ಬೆಳೆಸಿ ಅವು ಆಸ್ತಿಯಾಗುವಂತೆ ನೋಡಿಕೊಳ್ಳಬೇಕೆಂದರು. ಬಿಆರ್‌ಟಿಎಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ನೂರಮನ್ಸೂರ ಮಾತನಾಡಿ, ಪರಿಸರದ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಬಿಆರ್‌ಟಿಎಸ್ ಕಾರಿಡಾರನ್ನು ಹಸಿರು ಯೋಜನೆಯಾಗಿ ರೂಪಿಸಲಾಗುತ್ತಿದೆ. ಒಟ್ಟು 8 ಸಾವಿರ ಸಸಿ ನೆಡುವ ಗುರಿಯಲ್ಲಿ ಈಗಾಗಲೇ 4 ಸಾವಿರ ಸಸಿ ನೆಡಲಾಗಿದೆ ಎಂದರು. ಜಗತ್ತಿನ 150 ರಾಜ್ಯಗಳಲ್ಲಿ ಈಗಾಗಲೇ ಬಿಆರ್‌ಟಿಎಸ್ ಯೋಜನೆ ಆಸ್ತಿತ್ವದಲ್ಲಿದ್ದು ಭಾರತದಲ್ಲಿ ಅಹಮದಬಾದ್‌ನಲ್ಲಿ ಯಶಸ್ವಿಯಾಗಿ ಕಾರ್ಯಚರಣೆಯಲ್ಲಿದೆ. ಅದೇ ಮಾದರಿಯಲ್ಲಿ ಹು-ಧಾ ಮಧ್ಯೆ ಯೋಜನೆ 2015ರೊಳಗೆ ಮುಗಿಸುವ ಉದ್ದೇಶವಿದೆ. ಈಗಾಗಲೇ ಅವಳಿ ನಗರಗಳ ಮಧ್ಯೆ ಜಂಟಿ ಮೋಜಣಿ ಕಾರ್ಯ ಮುಕ್ತಾಯ ಹಂತದಲ್ಲಿದ್ದು ಅಮರಗೋಳ, ರಾಯಾಪುರ, ಸತ್ತೂರು ಗ್ರಾಮಗಳ ಯೋಜನಾ ಬಾಧಿತರಿಗೆ ಪ್ರಥಮ ದರ ನಿಗದಿಪಡಿಸುವ ಸಭೆಯನ್ನು ಮುಕ್ತಾಯಗೊಳಿಸಿದ್ದೇವೆಂದು ಹೇಳಿದರು.
ಪ್ರಾಚಾರ್ಯ ಡಾ.ಶ್ರೀನಾಥ ಠಾಕೂರ ಮಾತನಾಡಿದರು. ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿದರು.