ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಆಂಗ್ಲ ಭಾಷಾಜ್ಞಾನ ಅಗತ್ಯ

Lingaraj Badiger
Updated On : 3 Aug 2013, 11:16 am

ಕನ್ನಡಪ್ರಭ ವಾರ್ತೆ, ಹಾವೇರಿ, ಆ. 2
ಉಪನ್ಯಾಸಕರು ಆಂಗ್ಲ ಭಾಷೆಯ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು, ಜಾಗತಿಕ ಪೈಪೋಟಿಗೆ ಅವಶ್ಯವಿರುವ ಪರಿಣಾಮಕಾರಿ ಸಂವಹನಾಕಾರರು ಬೆಳೆದುಬರಬೇಕಿದೆ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ೤ ಬಿ.ಆರ್. ಅನಂತನ್ ಅಭಿಪ್ರಾಯಪಟ್ಟರು.
ಅವರು ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಯುಜಿಸಿ ಮತ್ತು ಕವಿವಿ ಇಂಗ್ಲಿಷ್ ಅಧ್ಯಾಪಕರ ವೇದಿಕೆಯ ಆಶ್ರಯದಲ್ಲಿ ಆಂಗ್ಲಭಾಷೆ ಮತ್ತು ಸಂವಹನ ಕಲೆ ಕುರಿತಾದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅರಿವು ಮೂಡಬೇಕಿದೆ
ಯುವ ಜನಾಂಗಕ್ಕೆ ಆಂಗ್ಲಭಾಷಾ ಜ್ಞಾನ ಅಗತ್ಯವಿದ್ದು, ಆಂಗ್ಲ ಸಾಹಿತ್ಯಕ್ಕಿಂತ ಸಂವಹನ ಕ್ರಿಯೆಗೆ ಮಹತ್ವ ನೀಡುವ ಅನಿವಾರ್ಯತೆ ಬಹಳಷ್ಟಿದೆ. ಪ್ರತಿಯೊಬ್ಬರೂ ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದಾಗ ಜೀವನ ಬೆಳಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಸದ್ಯದ ಬೆಳವಣಿಗೆಯನ್ನು ಅವಲೋಕಿಸಿ ನೋಡಿದಾಗ ವ್ಯವಹಾರಿಕವಾಗಿ ಆಂಗ್ಲ ಭಾಷೆಯ ಅರಿವು ಎಲ್ಲರಲ್ಲೂ ಮೂಡಬೇಕಿದೆ ಎಂದರು.
ವಿಚಾರ ಸಂಕಿರಣದ ಮುಖ್ಯ ಭಾಷಣಕಾರರಾಗಿದ್ದ ಗುಲ್ಬರ್ಗಾ ವಿವಿಯ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ೤ ವಿ.ಆರ್. ಬಡಿಗೇರ ಮಾತನಾಡಿ, ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಹಲವರು ಆಂಗ್ಲಭಾಷೆ ಅಭಿವ್ಯಕ್ತಪಡಿಸುವ ತರಗತಿಗಳಿಗೆ ಹೆಚ್ಚು ಮಹತ್ವ ನೀಡುತ್ತಿರುವುದು ಆಂಗ್ಲಭಾಷಾ ಉಪನ್ಯಾಸಕರ ಮೌಲ್ಯ ಕುಸಿಯಲು ಕಾರಣವಾಗುತ್ತಿದ್ದು, ಆಂಗ್ಲಭಾಷೆಯ ಮೆರಗು ಕುಂದುತ್ತಿದೆ. ಇದೊಂದು ಕಳವಳಕಾರಿ ಬೆಳವಣಿಗೆ. ಆಂಗ್ಲಭಾಷಾ ಪ್ರಯೋಗಾಲಯಗಳನ್ನು ಆರಂಭಿಸುವಾಗಿನ ಉತ್ಸಾಹ ಕೊನೆಗೆ ಕಳೆಗುಂದುತ್ತಿರುವುದು ಭಾಷಾ ಬೆಳವಣಿಗೆಗೆ ಅಡ್ಡ ಪರಿಣಾಮ ಉಂಟು ಮಾಡುತ್ತಿರುವುದು ವಿಷಾದನೀಯ ಎಂದರು.
ಕೆಎಲ್ಇ ಸಂಸ್ಥೆಯ ಸದಸ್ಯ ಎಸ್.ಸಿ. ಮೆಟಗುಡ್ಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಭಾಷಾತಜ್ಞರ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ, ಕವಿವಿ ಇಂಗ್ಲಿಷ್ ವಿಭಾಗದ ಶ್ಯಾಮಲಾ ರತ್ನಾಕರ, ಕೆಎಲ್ಇ ನಿಕಟಪೂರ್ವ ನಿರ್ದೇಶಕ ಎಂ.ಸಿ. ಕೊಳ್ಳಿ, ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕೆ. ಶಿರೂರ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಡಾ. ಎಂ.ವೈ. ಮೋಳೇಕರ ಉಪಸ್ಥಿತರಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಅಧ್ಯಾಪಕರು, ವಿದ್ಯಾರ್ಥಿಗಳು ಪ್ರಬಂಧ ಮಂಡಿಸಿದರು. ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವರ್ಷಾ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಪ್ರಾಚಾರ್ಯ ಡಾ. ಬಿ.ಸಿ. ಬನ್ನೂರ ಸ್ವಾಗತಿಸಿದರು. ಪ್ರೊ.  ಎನ್.ವಿ. ಕಂಬಾಳಿಮಠ, ಡಾ.ಎಸ್.ಎಸ್. ಹಲಗೇರಿ, ಡಾ. ಗುರುನಾಥ ಬಡಿಗೇರ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಆರ್.ಐ. ಇನಾಮದಾರ ನಿರೂಪಿಸಿದರು. ಪ್ರೊ. ಎನ್. ಕೆಂಚವೀರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement