ತಿಪ್ಪಾಯಿಕೊಪ್ಪ ಸೇತುವೆ ಮುಳುಗಡೆ
ಹಿರೇಕೆರೂರು: ಕುಮದ್ವತಿ ನದಿಗೆ ಪ್ರವಾಹ ಬಂದ ಹಿನ್ನೆಲೆಯಲ್ಲಿ ತಾಲೂಕಿನ ತಿಪ್ಪಾಯಿಕೊಪ್ಪದ ಸೇತುವೆ ಸಂಪೂರ್ಣವಾಗಿ ಮುಳುಗಿ, ಶಿಕಾರಿಪುರ ಹಾಗೂ ರಾಣಿಬೆನ್ನೂರು ಸಂಪರ್ಕ ಕಡಿತಗೊಂಡಿದೆ.
ಗುರುವಾರ ರಾತ್ರಿಯಿಂದಲೇ ಕುಮದ್ವತಿ ನದಿಗೆ ಅಪಾರ ಪ್ರಮಾಣದ ನೀರು ಹರಿದ ಬಂದಿದ್ದು, ಮಾಸೂರ ಹಾಗೂ ಶಿಕಾರಿಪುರ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಸಾರಿಗೆ ಸಂಸ್ಥೆ ಬಸ್ಸುಗಳೂ ಸಂಚರಿಸದ ಕಾರಣ ಜನತೆ ಪರದಾಡಿದರು. ಕುಮದ್ವತಿ ನದಿ ತಟದ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ.
ಯಲಿವಾಳ ಸೇತುವೆ ಮುಳುಗಿತು
ಯಲಿವಾಳ ಬಳಿ ಇರುವ ಸೇತುವೆಯೂ ಮುಳುಗಿದ್ದರಿಂದ ಚಪ್ಪರದಳ್ಳಿ ಯಲಿವಾಳ ಹಾಗೂ ಚಿಕ್ಕಮೊರಬ ಗ್ರಾಮಗಳ ಜನತೆ ರಟ್ಟಿಹಳ್ಳಿ ಸಂಪರ್ಕ ಕಳದುಕೊಂಡಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶುಕ್ರವಾರ ರಟ್ಟಿಹಳ್ಳಿ ಸಂತೆಗೆ ಬರುವ ಜನರಿಗೆ ಸಮಸ್ಯೆಯಾಗಿದೆ. ಪ್ರತಿ ವರ್ಷ ಕುಮದ್ವತಿ ನದಿಗೆ ಪ್ರವಾಹ ಬಂದಾಗಲೂ ಜನತೆ ಈ ಸಮಸ್ಯೆ ಎದುರಿಸುತ್ತಿದ್ದಾರೆ.
ದ್ವೀಪವಾದ ಮಳಗಿ ಗ್ರಾಮ ರಟ್ಟಿಹಳ್ಳಿಗೆ ಕೂಗಳತೆಯಲ್ಲಿದೆ. ಈ ಹಿಂದೆ ಹಲವು ಬಾರಿ ಜನಪ್ರತಿನಿಧಿಗಳು ಈ ಸೇತುವೆ ನಿರ್ಮಾಣಕ್ಕೆ ಪೂಜೆ ನೆರವೇರಿಸಿದ್ದರೂ ಕಾಮಗಾರಿ ನೆನೆಗುದಿಗೆ ಬಿದ್ದ ಪರಿಣಾಮ ಜನತೆಗೆ ಸೇತುವೆ ಹಾಗೂ ರಟ್ಟಿಹಳ್ಳಿಗೆ ನೇರ ಸಂಪರ್ಕ ಕನಸಿನ ಮಾತಾಗಿದೆ.
ಸೇತುವೆಯ ಕಥೆ-ವ್ಯಥೆ
1962ರಲ್ಲಿ ತಿಪ್ಪಾಯಿಕೊಪ್ಪದಲ್ಲಿ ಕುಮದ್ವತಿ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಅವೈಜ್ಞಾನಿಕವಾಗಿದೆ. ಪ್ರವಾಹ ಬಂದಾಗಲೆಲ್ಲ ಅದು ಮುಳುಗಿ ಹಾವೇರಿ- ಶಿವಮೊಗ್ಗ ಸಂಪರ್ಕ ಕಡಿದುಹೋಗುತ್ತದೆ. ಜಿಲ್ಲಾ ರಸ್ತೆಯಲ್ಲಿರುವ ಈ ಶಿಥಿಲ ಸೇತುವೆಯನ್ನು ಎತ್ತರಿಸಿ ಕಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ನಿಂಗಪ್ಪ ಚಳಗೇರಿ ಆಗ್ರಹಿಸಿದ್ದಾರೆ.
ತಾಲೂಕಿನ ಐತಿಹಾಸಿಕ ಮದಗದ ಕೆಂಚವ್ವನ ಕೆರೆಯಿಂದ ರೂಪಿತವಾಗಿರುವ ಕುಮದ್ವತಿ ನದಿ ತಿಪ್ಪಾಯಿಕೊಪ್ಪ ಗ್ರಾಮದ ಮೂಲಕ ಸಾಗುತ್ತದೆ. ನದಿಗೆ 50 ಅಡಿ ಅಗಲ, 200 ಮೀಟರ್ ಉದ್ದದ ಸೇತುವೆ ಕಟ್ಟಲಾಗಿತ್ತು. ಆದರೆ ಈ ಸೇತುವೆಯ ಎರಡು ಕಡೆ ಗ್ರಿಲ್ ಹಾಗೂ ತಡೆಗೋಡೆಗಳು ಹಾಳಾಗಿವೆ. ಮಳೆಗಾಲದಲ್ಲಿ ಮದಗದ ಕೆರೆ ತುಂಬಿ ಕೋಡಿ ಹರಿದರೆ ಈ ಸೇತುವೆ ಸಂಪೂರ್ಣ ಜಲಾವೃವಾಗುತ್ತದೆ. ಕಡಿಮೆ ನೀರಿದ್ದಾಗಲೂ ಸೇತುವೆ ಮೇಲೆ ಸಾಗುವ ವಾಹನಗಳು ಆಯತಪ್ಪಿದರೆ ನೇರ ನದಿಗೆ ಬೀಳುತ್ತವೆ. ಈ ಹಿಂದೆ ದ್ವಿಚಕ್ರವಾಹನ ಸವಾರರು ಮತ್ತು ಆಟೋದವರು ಬಿದ್ದಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಲಾರಿಯೊಂದು ಬಿದ್ದಿತ್ತು. ಆದರೂ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಈ ಸೇತುವೆ ಕಾಯಕಲ್ಪಕ್ಕೆ ಮುಂದಾಗಿಲ್ಲ. ಇದು ಈ ಭಾಗದ ಜನತೆಯ ದೌರ್ಭಾಗ್ಯ ಎನ್ನುತ್ತಾರೆ ಸ್ಥಳೀಯರು.
ಸುತ್ತು ಬಳಸಿನ ದಾರಿ
ತಾಲೂಕಿನಿಂದ ನೇರವಾಗಿ ಶಿಕಾರಿಪುರಕ್ಕೆ ದಿನಿನತ್ಯ ಖಾಸಗಿ ಬಸ್ಸುಗಳು ಹಾಗೂ ಹಲವು ವಾಹನಗಳು ಈ ಸೇತುವೆಯ ಮೇಲೆ ಹೋಗುತ್ತದೆ. ಡೋಣಿಸಾಲಿನ ಜನತೆಗೆ ಸಂಚಾರಕ್ಕೂ ಇದೇ ದಾರಿ. ಈಗ ಕುಮದ್ವತಿ ನದಿ ಸೇತುವೆ ಮೇಲೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ, ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಹಿರೇಕೆರೂರಿನಿಂದ ಶಿಕಾರಪುರಕ್ಕೆ ಹೋಗಬೇಕಾದರೆ ಶಿರಾಳಕೊಪ್ಪ ಬಳಸಿ ಸಾಗಬೇಕು. ಹಣ ಹಾಗೂ ವೇಳೆ ವ್ಯರ್ಥವಾಗುತ್ತದೆ. ರಟ್ಟಿಹಳ್ಳಿ-ಹಳ್ಳೂರ ಮೂಲಕ ಸಾಗಿದರೂ ಇದೇ ಕಥೆ. ತಾಲೂಕಿನ ಮೇದೂರು, ಕೋಡಮಗ್ಗಿ, ಹೊಸಕಟ್ಟಿ, ನಾಗವಂದ ಅಣಜಿ, ತಡಕನಹಳ್ಳಿ, ಗುಡ್ಡದಮಾದಾಪುರ, ಕಮಲಾಪುರ ಜನತೆಯೂ ಈ ಸೇತುವೆ ಮೂಲಕ ಬರಲು ಮಳೆಗಾಲದಲ್ಲಿ ಕಷ್ಟ ಅನುಭವಿಸುತ್ತಾರೆ.