ಆಂಗ್ಲಭಾಷಾ ಸಂವಹನಕ್ಕೆ ಹಿನ್ನಡೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 3
ಭಾರತ ಕ್ರಿ.ಶ. 1853ರಲ್ಲಿ ಕೇವಲ 3 ವಿಶ್ವವಿದ್ಯಾಲಯಗಳು ಹಾಗೂ 27 ಕಾಲೇಜುಗಳು ಇದ್ದಾಗ ಆಂಗ್ಲಭಾಷೆ ಸಮೃದ್ಧಿಯನ್ನು ಸಾಧಿಸಿತ್ತು. ಆದರೆ ಇಂದು 650 ವಿವಿಗಳು ಹಾಗೂ 36 ಸಾವಿರ ಕಾಲೇಜುಗಳಿದ್ದರೂ ಭಾರತೀಯ ಇಂಗ್ಲಿಷ್ ಸಂವಹನ ಇನ್ನೂ ಸುಧಾರಣೆ ಆಗಿಲ್ಲ ಎಂದು ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ಸದಸ್ಯ, ಎಸ್ಎಸ್ಸಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಡಿ.ಆರ್. ಮೋರೆ ವಿಷಾದಿಸಿದರು.
ನಗರದ ಕೆಎಲ್ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಯುಜಿಸಿ ಮತ್ತು ಕವಿವಿ ಇಂಗ್ಲಿಷ್ ಅಧ್ಯಾಪಕರ ವೇದಿಕೆಯ ಆಶ್ರಯದಲ್ಲಿ ಜರುಗಿದ ಆಂಗ್ಲಭಾಷೆ ಮತ್ತು ಸಂವಹನ ಕಲೆ ಕುರಿತಾಗಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಂವಹನ ಬಲಗೊಳ್ಳಲಿ
ಈ ಹಿಂದೆ ಭಾರತವನ್ನು ಭಾಷಾವಾರು ವಿಂಗಡನೆ ಮಾಡುವ ಸಂದರ್ಭದಲ್ಲಿ, ದಕ್ಷಿಣ ಮತ್ತು ಉತ್ತರ ಭಾರತಗಳಲ್ಲಿ ಭಾಷೆಯ ಪ್ರಾಬಲ್ಯಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿದಾಗ ಆಂಗ್ಲ ಮತ್ತು ಹಿಂದಿ ಭಾಷೆಗಳ ಮಧ್ಯೆ ಭಾರೀ ಪೈಪೋಟಿ ಎದುರಾಗಿತ್ತು. ಕೊನೆಗೆ ಆಂಗ್ಲ ಭಾಷೆಯೇ ಮೇಲುಗೈ ಸಾಧಿಸಿತ್ತು. ಭಾಷೆಗೆ ಯಾವುದೇ ಗಡಿಯಿಲ್ಲ, ಮಿತಿಯಿಲ್ಲ. ಅದು ಸರ್ವವ್ಯಾಪಿ. ಸಂವಹನದ ವಿಷಯ ಬಂದಾಗ ಮಾತೃಭಾಷೆಗೆ ಪ್ರತಿಯೊಬ್ಬರೂ ಗೌರವ ನೀಡಬೇಕು. ಸ್ವಭಾಷಾ ನಿಷ್ಠೆ ಪರಭಾಷಾ ಸಹಿಷ್ಣುತೆ ಸರ್ವರಲ್ಲೂ ಬೆಳೆದು ಬಂದಾಗ ಸಂವಹನ ಬಲಗೊಳ್ಳಲು ಸಾಧ್ಯ ಎಂದರು.
ಉಳಿಸಿ, ಬೆಳೆಸಿ, ಬಳಸಿ
ವಿಶೇಷ ಆಹ್ವಾನಿತರಾಗಿದ್ದ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಆಂಗ್ಲ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಭಾಷಾಭಿಮಾನ ಎಲ್ಲರಲ್ಲೂ ಮೂಡಿಬರಬೇಕಿದೆ. ಆಂಗ್ಲಭಾಷೆ ವಿಶ್ವಭಾಷೆಯಾಗಿ ಮಾನ್ಯತೆ ಪಡೆದಿದೆ. ಸಮೂಹ ಸಂವಹನದ ಮೂಲಕ ಮೌಲ್ಯಗಳನ್ನು ಉಳಿಸಿ-ಬೆಳೆಸಿ-ಬಳಸಿಕೊಳ್ಳುವ ಕಲೆ ಪ್ರತಿಯೊಬ್ಬರಲ್ಲೂ ಬೆಳೆದುಬರಲಿ. ಆಂಗ್ಲ ಭಾಷೆಯ ಅರಿವು ಇಲ್ಲದೇ ಹೋದರೆ ಭವಿಷ್ಯ ಬರಡಾಗುತ್ತದೆ ಎಂದರು.
ಆಂಗ್ಲ ಕೇವಲ ಭಾಷೆಯಾಗಿರದೆ ಅದು ನಮ್ಮ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಧಕಗಳನ್ನು ತೋರಿಸುವ ಮಹತ್ತರ ಕಾರ್ಯ ಮಾಡುತ್ತಿದ್ದು, ರಾಷ್ಟ್ರೀಯ ವಿಚಾರ ಸಂಕಿರಣಗಳು ಜ್ಞಾನ ಮತ್ತು ಬುದ್ಧಿಯ ಬೆಳವಣಿಗೆಗೆ ಪೂರಕವಾಗುವ ದೆಸೆಯಲ್ಲಿ ಆಗಾಗ ಜರುಗಿ ಭಾಷೆಯ ಮತ್ತು ವಿಷಯದ ಮೇಲೆ ಬೆಳಕು ಚೆಲ್ಲಲಿ ಎಂದು ಆಶಿಸಿದರು.
ಅಧ್ಯಕ್ಷತೆಯನ್ನು ಕೆಎಲ್ಇ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಎಂ.ಸಿ. ಕೊಳ್ಳಿ ವಹಿಸಿದ್ದರು. ಡಾ ಗುರುನಾಥ ಬಡಿಗೇರ, ಮಹಾವಿದ್ಯಾಲಯದ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಡಾ ಎಂ.ವೈ. ಮೋಳೇಕರ ಉಪಸ್ಥಿತರಿದ್ದರು. 265ಕ್ಕೂ ಮಿಕ್ಕಿದ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಚಾರ ಸಂಕಿರಣಕ್ಕೆ ಸಹಕಾರ ನೀಡಿದ ಹಾವೇರಿ ಕೆವಿಜಿ ಬ್ಯಾಂಕಿನ ವ್ಯವಸ್ಥಾಪಕರಾದ ಎ.ಎನ್. ಮುದಕಣ್ಣನವರ, ಎ.ಆರ್. ದೇಸಾಯಿ ಹಾಗೂ ಫಾರ್ ಯು ಗಿಫ್ಟ್ ಸೆಂಟರ್ನ ಬಸವರಾಜ ಮಾಸೂರ ಅವರನ್ನು ಸನ್ಮಾನಿಸಲಾಯಿತು.
ವರ್ಷಾ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ ಬಿ.ಸಿ. ಬನ್ನೂರ ಸ್ವಾಗತಿಸಿದರು. ಪ್ರೊ ಎನ್.ವಿ. ಕಂಬಾಳಿಮಠ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ಆರ್.ಎನ್. ಇನಾಮದಾರ ನಿರೂಪಿಸಿದರು. ಡಾ ಎನ್.ಆರ್. ಬಿರಸಾಲ ವಂದಿಸಿದರು.