ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಗನೂರು ಕೆರೆಗೆ ವರದೆ-ವರುಣ ಕೃಪೆ

Mainashree
Updated On : 4 Aug 2013, 1:11 am

 ಬಿ.ಎಸ್. ಹಿರೇಮಠ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 3

ವರದೆ ಹಾಗೂ ವರುಣನ ಕೃಪೆಯಿಂದಾಗಿ ಪಟ್ಟಣದ ಕುಡಿಯುವ ನೀರಿನ ದಾಹ ತಣಿದಿದೆ. ಈಗ 2-3 ದಿನಗಳಿಗೊಮ್ಮೆ ನೀರು ಪೂರೈಕೆ ಆಗುವಂತಾಗಿದ್ದು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಎರಡು ದಶಕಗಳ ಬಳಿಕ ವರದಾ ನದಿಯಿಂದ ನೀರು ಶಿಗ್ಗಾಂವಿಯ ನಾಗನೂರ ಕೆರೆಗೆ ಶುಕ್ರವಾರ ಹರಿದು ಬಂದಿದೆ. ನೆನೆಗುದಿಗೆ ಬಿದ್ದ ಈ ಯೋಜನೆ ವರದೆಯ ಕೃಪೆಯಿಂದಾಗಿ ಸಮರ್ಪಣೆಗೊಂಡಂತಾಗಿದೆ. ಅಷ್ಟೇ ಅಲ್ಲ, ಪಟ್ಟಣದ ಜನರ ದಶಕದ ಕನಸು ನನಸಾಗಿದೆ. ಎರಡು ವರ್ಷಗಳಿಂದ ವರುಣನ ಅವಕೃಪೆಯಿಂದಾಗಿ ಪಟ್ಟಣದ ಹೊರವಲಯದ ಐತಿಹಾಸಿಕ ನಾಗನೂರ ಕೆರೆ ಬತ್ತಿ ಹೋಗಿತ್ತು. ಕುಡಿಯುವ ನೀರಿಗೂ ಹರಸಾಹಸ ಮಾಡುವಂತಾಗಿತ್ತು. ಕೊಳವೆ ಬಾವಿಗಳು ಹಾಗೂ ತೆರೆದ ಬಾವಿಗಳೂ ಬತ್ತಿ ಹೋಗಿ, ಸುತ್ತಲಿನ ತೋಟ - ಗದ್ದೆಗಳಲ್ಲಿ ರೈತರ ಬೆಳೆಗಳು ಒಣಗುತ್ತಿದ್ದವು. ರೈತರು ಪೂರ್ಣವಾಗಿ ಅಸಹಾಯಕರಾಗಿದ್ದರು. ಪಟ್ಟಣದ ಜನರಿಗೆ ಕುಡಿಯುವ ನೀರು 15 ದಿನಕ್ಕೊಮ್ಮೆ ಪೂರೈಕೆಯಾಗಿ, ನಾಗರಿಕರು ನಿತ್ಯ ಪ್ರತಿಭಟನೆ ಮಾಡುವಂತಾಗಿತ್ತು.
ತಾಂತ್ರಿಕ ದೋಷದಿಂದ...
ಶಿಗ್ಗಾಂವಿ, ಸವಣೂರು ಮತ್ತು ಬಂಕಾಪುರ - ಈ ಮೂರು ಪಟ್ಟಣಗಳ ಜನರಿಗೆ ಶಾಶ್ವತ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಈ ಯೋಜನೆ 1992ರಲ್ಲಿ ಅನುಷ್ಠಾನಗೊಂಡಿತ್ತು. ಆದರೆ ತಾಂತ್ರಿಕ ದೋಷದ ಪರಿಣಾಮ ಸಮರ್ಪಕವಾಗಿ ಅನುಷ್ಠಾನವಾಗದೆ, ಈ ಮೂರು ಪಟ್ಟಣಗಳ ಜನತೆ ತಾವು ಶಾಪಗ್ರಸ್ತರು ಎಂದೇ ಭಾವಿಸುವಂತಾಗಿತ್ತು. ಮೊದಲ ಹಂತವಾಗಿ ಸವಣೂರಿನ ಮೋತಿ ತಲಾಬ ಕೆರೆಗೆ ಹರಿದ ನದಿ ನೀರು ಶುದ್ದೀಕರಣದ ಮೂಲಕ ಪಟ್ಟಣದ ಜನರಿಗೆ ಪೂರೈಕೆಯಾಗುತ್ತಿದೆ. 2ನೇ ಹಂತದಲ್ಲಿ ಶಿಗ್ಗಾಂವಿಯ ನಾಗನೂರ ಕೆರೆಗೆ ಶುಕ್ರವಾರ ವರದಾ ನದಿಯಿಂದ ನೀರು ಹರಿಯುತ್ತಿದೆ. ಇದರಿಂದ ಪಟ್ಟಣದ ಜನರಿಗೆ ನೀರಿನ ಸಮಸ್ಯೆಗೆ ಪರಿಹಾರ ಕಂಡಂತಾಗಿದೆ. ವರದಾ ನದಿಯಿಂದ ಕೆರೆಗೆ ಹರಿಯುವ ನೀರು ಅಕ್ಕಪಕ್ಕದ ಸಾವಿರಾರು ಎಕರೆ ಕೃಷಿಭೂಮಿಗೂ ಸಂಜೀವಿನಿಯಾಗಿದೆ.
ಕೊನೆಗೂ ನೀರು ಬಂತು...
ಕೆಲ ದಿನಗಳಿಂದ ವರದಾ ನೀರು ಬಿಡಲು ಸಾಕಷ್ಟು ತಾಂತ್ರಿಕ ದೋಷ ಎದುರಾಗಿತ್ತು. ನೀರಿನ ಪ್ರಮಾಣವು ಕಡಿಮೆಯಾಗಿತ್ತು. ಆದರೆ ಶುಕ್ರವಾರ ಸಾಯಂಕಾಲ 6 ಗಂಟೆ ವೇಳೆಗೆ ವರದೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದು ಜನರಲ್ಲಿ ಸಂಭ್ರಮ ಮೂಡಿಸಿತು. ಇತ್ತ ವರುಣನೂ ಕೃಪಾವೃಷ್ಟಿಗರೆದಿದ್ದಾನೆ. ತಾನೇನು ಕಡಿಮೆ ಎಂಬಂತೆ ಸಾಕಷ್ಟು ಪ್ರಮಾಣದಲ್ಲಿ ಮಳೆ ತಂದು, ನಾಗನೂರು ಕೆರೆ ತುಂಬುವಲ್ಲಿ ತನ್ನ ಕಾಣಿಕೆಯನ್ನೂ ಸಲ್ಲಿಸಿದ್ದಾನೆ. ಕೆರೆಗೆ ನೀರು ಹರಿಸುವ ವೇಳೆ ತಹಸೀಲ್ದಾರ್ ಎಸ್.ಎ. ಚೌಗಲೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕಡೆಮನಿ, ಅಭಿಯಂತರಾದ ಎಸ್.ಕೆ. ಹೆಗಡೆ ಉಪಸ್ಥಿತರಿದ್ದರು.
ಮೂರು ದಿನಕ್ಕೊಮ್ಮೆ ನೀರು
(ಯುಐಡಿಎಸ್‌ಎಚ್‌ಎಂಟಿ ಅಭಿವೃದ್ಧಿ ಯೋಜನೆಯಡಿ ಕಾರ್ಯಗತಗೊಂಡ ವರದಾ ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ವರದಾ ನದಿ ನೀರು ನಾಗನೂರ ಕೆರೆಗೆ ಹರಿದು ಬರುತ್ತಿದೆ. ಇದರಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಜಲಶಕ್ತಿ ತುಂಬಿಕೊಳ್ಳುತ್ತವೆ. ಕನಿಷ್ಠ 3 ದಿನಕ್ಕೊಮ್ಮೆ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಸಾಧ್ಯವಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯಕರ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement