ಮನುಷ್ಯನ ಸ್ವಾರ್ಥಕ್ಕೆ ಅರಣ್ಯ ಬಲಿ: ಡಾ ಹೊನ್ನಳ್ಳಿ ವಿಷಾದ
ಹಾನಗಲ್ಲ: ಅಭಿವೃದ್ಧಿಯ ಹೆಸರಿನಲ್ಲಿ ಮಾನವ ತನ್ನ ಸ್ವಾರ್ಥಕ್ಕೆ ನಿತ್ಯ ಮರಗಳ ಮಾರಣ ಹೋಮ ಮಾಡುತ್ತಿದ್ದು, ಇದರಿಂದ ಪರಿಸರ ಸಂಕಷ್ಟಕ್ಕೆ ಗುರಿಯಾಗುತ್ತಿದೆ ಎಂದು ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಣದಲ್ಲಿ ಎನ್ನೆಸ್ಸೆಸ್ ಘಟಕ ಹಾಗೂ ವಿವೇಕಾನಂದ ಯುವ ಸ್ವಯಂ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಅಭಿಯಾನ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿದ ಅವರು, ಸಾರ್ವಜನಿಕರು ಹಸಿರನ್ನು ಬೆಳೆಸಿ ಉಸಿರು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು. ಸಸಿಗಳನ್ನು ನೆಟ್ಟರೆ ಸಾಲದು, ಅವುಗಳನ್ನು ಹೆಮ್ಮರವಾಗಿ ಬೆಳೆಸುವ ಮಹೋನ್ನತ ಜವಾಬ್ದಾರಿ ನಮ್ಮದಾಗಬೇಕು. ಆಗ ಮಾತ್ರ ನಮ್ಮ ಬಾಳು ಸಾರ್ಥಕ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಹ್ಮದ್ ಶರೀಫ್ ಹಾನಗಲ್, ಪರಿಸರದ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಪರಿಸರವನ್ನು ಉಳಿಸಬೇಕಾದ ಮಾನವ ಮರಗಳನ್ನು ಕೊಲ್ಲುವ ಹೀನ ಕೃತ್ಯಕ್ಕಿಳಿದಿರುವುದು ಬೇಸರದ ಸಂಗತಿ. ಇದರಿಂದ ಪ್ರಾಣಿ ಹಾಗೂ ಸಸ್ಯ ಸಂಕುಲ ವಿನಾಶಕ್ಕೆ ತುತ್ತಾಗುವ ಭೀತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಎನ್ನೆಸ್ಸೆಸ್ ಅಧಿಕಾರಿ ದಿನೇಶಪ್ಪ ಸಿಂಗಾಪುರ, ಎಚ್.ಜಿ. ಸಣಗೌಡ್ರ, ವಿವೇಕಾನಂದ ಯುವ ಸ್ವಯಂ ಸೇವಾ ಸಂಘದ ಅಧ್ಯಕ್ಷ ಟಿಪ್ಪು ಸುಲ್ತಾನ ನಾಯ್ಕವಾಡಿ, ಉಪನ್ಯಾಸಕರಾದ ಡಾ ಸಿ. ಕೊಟ್ರೇಶ, ರವಿಕುಮಾರ ಜಿ., ಶಿವಣ್ಣ ಆರ್., ಮುಕುಂದ ದೊಡ್ಡಮನಿ, ಹರೀಶ ಉಪಸ್ಥಿತರಿದ್ದರು. ಲಕ್ಷ್ಮೀ ಜನಗೇರಿ ಪ್ರಾರ್ಥಿಸಿದರು. ಶ್ವೇತಾ ಎಸ್.ಜಿ. ಸ್ವಾಗತಿಸಿದರು. ಗುಡ್ಡಪ್ಪ ಜಿಗಿಳಿಕೊಪ್ಪ ನಿರೂಪಿಸಿದರು. ಗುತ್ತೆಮ್ಮ ವಂದಿಸಿದರು.