ವ್ಯಾಪಕ ಮಳೆ: ಬೆಳೆ, ಮನೆಗಳಿಗೆ ಹಾನಿ
ಶಿಗ್ಗಾಂವಿ: ತಾಲೂಕಿನಾದ್ಯಾಂತ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೂರಾರು ಮನೆಗಳು ಬಿದ್ದಿವೆ. ಕೋಣನಕೇರಿ ಗ್ರಾಪಂ ವ್ಯಾಪ್ತಿಯಲ್ಲಿ 50 ಮನೆಗಳು ಭಾಗಶಃ ಕುಸಿದಿವೆ. ಅದೃಷ್ಟವಶಾತ್ ಪ್ರಾಣಹಾನಿ ತಪ್ಪಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಭಾರಿ ಮಳೆಯಾಗುತ್ತಿದ್ದು, 15 ಮನೆಗಳು, ಕೋಣನಕೇರಿಯಲ್ಲಿ 10 ಮನೆಗಳು ಬಿದ್ದಿವೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಹೊರವಲಯದಲ್ಲಿರುವ ಬಸ್ತಿಕೆರೆ ತುಂಬಿ, ಸುತ್ತಲಿನ 40 ಎಕರೆಗೂ ಹೆಚ್ಚು ಬತ್ತದ ಗದ್ದೆಗಳಲ್ಲಿ ನೀರು ತುಂಬಿ ಕೆರೆಯಂತಾಗಿವೆ.
ಮಳೆಯಿಂದಾಗಿ ನಾಶವಾಗಿರುವ ಬತ್ತದ ಬೆಳೆ ಮತ್ತು ಮನೆಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಗ್ರಾಮ ಲೆಕ್ಕಾಧಿಕಾರಿಗಳೂ ಸರಿಯಾಗಿ ಪರಿಶೀಲನೆ ಮಾಡಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹದವಾದ ಮಳೆಯಿಂದ ಖುಷಿಯಲ್ಲಿದ್ದ ರೈತರ ನಗೆ ಅತಿವೃಷ್ಟಿಯ ಅನಾಹುತಕ್ಕೆ ಬಲಿಯಾಗುವ ಸಂಭವವಿದೆ. ರೈತನ ಕನಸು ಕೊಚ್ಚಿ ಹೋಗುವ ಸ್ಥಿತಿ ಉದ್ಭವಿಸಿದೆ. ಕೆಲವು ಬೆಳೆಗಳಿಗೆ ಕೀಟ ಬಾಧೆ ಇದ್ದು, ಔಷಧ ಸಿಂಪಡಿಸಲೂ ಮಳೆ ಅವಕಾಶ ಕೊಡುತ್ತಿಲ್ಲ. ಮತ್ತೊಂದೆಡೆಗೆ ಬಿಸಿಲಿಲ್ಲದೆ ಜವಳು ಹಿಡಿದಿದೆ. ಬೆಂಕಿ ರೋಗ ಕಾಣಿಸಿಕೊಂಡು, ಬೆಳೆಗಳು ಜವಳಿನಿಂದ ಹಳದಿಯಾಗುತ್ತಿವೆ. ಬೆಳೆಗಿಂತ ಹೊಲಗಳಲ್ಲಿ ಕಳೆಯೇ ಹೆಚ್ಚಾಗಿದೆ.
ರೈತರು ನಷ್ಟ ಅನುಭವಿಸಿ ಮತ್ತೆ ಸಾಲಬಾಧೆಗೆ ಸಿಲುಕುವರು. ಜನ ಸಾಮಾನ್ಯರು ಹಾಗೂ ಜಾನುವಾರುಗಳಿಗೂ ಆಹಾರದ ಕೊರತೆ ಕಾಡುವ ಅಪಾಯ ಎದುರಾಗಿದೆ. ಕೆಲವರಂತೂ ಬೇರೆ ಉದ್ಯೋಗ ಅರಸಿ ಗುಳೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂಬುದು ತಾಲೂಕಿನ ಜನತೆಯ ಆಗ್ರಹ.