ಹಾವೇರಿ: ಡಿಪ್ಲೊಮಾ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 3
ಡಿಪ್ಲೊಮಾ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ನ್ನು ಪದವಿ ರೀತಿಯಲ್ಲಿ ಸಂಪೂರ್ಣವಾಗಿ ಮೂರು ವರ್ಷ ನಡೆಸಿ, ಮುಂದಿನ ತರಗತಿಗಳಿಗೆ ಹಾಜರಾಗಲು ಹಾಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು. ಅವೈಜ್ಞಾನಿಕ ಹಾಗೂ ಕಠಿಣವಾಗಿರುವ ಹೊಸ ಪಠ್ಯಕ್ರಮವನ್ನು ಸರಳೀಕರಿಸಬೇಕು. ಒಂದು ಸೆಮಿಸ್ಟರ್‌ನಲ್ಲಿ ಕನಿಷ್ಠ 4 ತಿಂಗಳು ಕಡ್ಡಾಯವಾಗಿ ತರಗತಿಗಳು ನಡೆಯುವಂತೆ ಕ್ರಮವಹಿಸಬೇಕು.
ಪರೀಕ್ಷಾ, ಮರು ಮೌಲ್ಯಮಾಪನ, ಜೆರಾಕ್ಸ್ ಪ್ರತಿ ಇನ್ನಿತರ ಶುಲ್ಕಗಳನ್ನು ಕಡಿತಗೊಳಿಸಬೇಕು. ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಸೀಟು ಹಂಚಿಕೆಯಲ್ಲಿ ನಡೆಯುವ ಭ್ರಷ್ಟಾಚಾರ ತಡೆಗಟ್ಟಬೇಕು. ಗ್ರಂಥಾಲಯ, ಪ್ರಯೋಗಾಲಯ, ಅರ್ಹ ಉಪನ್ಯಾಸಕರು ಇನ್ನಿತರ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್‌ಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಸೆಮಿಸ್ಟರ್ ತರಗತಿಗಳು ಮುಗಿಯುವ ಮುನ್ನವೇ ಪರೀಕ್ಷೆಗಳು ಪ್ರಾರಂಭವಾಗುವುದನ್ನು ನಿಲ್ಲಿಸಬೇಕು. ಏಕಕಾಲದಲ್ಲಿ 2-3 ಪರೀಕ್ಷೆಗಳನ್ನು ನಿಗದಿ ಮಾಡುವುದನ್ನು ಕೈಬಿಡಬೇಕು.
ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಸಾವಿರಾರು ರುಪಾಯಿ ವಸೂಲಿ ಮಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳನ್ನು ನೀಡಿ, ಹಣ ನೀಡದೆ ಇರುವ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಅಗತ್ಯವಿರುವ ಕಡೆಗಳಲ್ಲೆಲ್ಲ ಸರ್ಕಾರಿ ಪಾಲಿಟೆಕ್ನಿಕ್‌ಗಳನ್ನು ಸ್ಥಾಪಿಸಬೇಕು. ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರ ಸೂಕ್ತ ಉದ್ಯೋಗಾವಕಾಶ ಒದಗಿಸಿಕೊಡಬೇಕು.
ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯ ಕೆಲವು ಅವೈಜ್ಞಾನಿಕ ನೀತಿಗಳಿಂದ ಡಿಪ್ಲೊಮಾ ವಿದ್ಯಾರ್ಥಿಗಳು ಆತ್ಮಹತ್ಯೆ ದಾರಿ ಹಿಡಿದಿದ್ದು, ಸರ್ಕಾರ ಕೂಡಲೇ ಕ್ಯಾರಿ ಓವರ್ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಎಸ್‌ಎಫ್‌ಐ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದೂ ಪ್ರತಿಭಟನಾಕಾರರು ಎಚ್ಚರಿಸಿದರು.
ನಗರದ ಕೊಳ್ಳಿ ಕಾಲೇಜ್ ಎದುರು ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ಸುಭಾಸ ಮಾದರ, ಭರತ್ ರೆಡ್ಡಿ, ಮಲ್ಲೇಶ ಗೋಟನವರ, ವಿಜಯಕುಮಾರ ಶಿಡ್ಲಣ್ಣನವರ, ನಿಖಿಲ್ ಡಿ., ಕಿರಣ ಶೆಟ್ಟರ್ ಇದ್ದರು.