ದುಂಡಶಿ ಆಸ್ಪತ್ರೆಗೇ ಅನಾರೋಗ್ಯ!
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 4
ಸರ್ಕಾರ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹಲವಾರು ಯೋಜನೆ ರೂಪಿಸುತ್ತಿದೆ. ಆದರೆ, ಮಲೆನಾಡಿದ ಅಂಚಿನಲ್ಲಿರುವ ದುಂಡಶಿ ಗ್ರಾಮ ಅದಕ್ಕೆಲ್ಲ ಹೊರತಾಗಿದೆ. ಇಲ್ಲಿರುವ ಸಾರ್ವಜನಿಕ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಇಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗೂ ವಸತಿ ಸೌಕರ್ಯಗಳಿಲ್ಲದೆ, ಆಸ್ಪತ್ರೆಯನ್ನೇ ವಸತಿ ಕೇಂದ್ರವಾಗಿ ಮಾಡಿಕೊಂಡಿದ್ದಾರೆ.
ದುಂಡಶಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಘಟಕವಿತ್ತು. ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲ ಆಗಲೆಂದು ಅದನ್ನು ಉನ್ನತೀಕರಿಸಿ, ಆರೋಗ್ಯ ಕೇಂದ್ರವಾಗಿ ಮಾಡಲಾಯಿತು. ಇಲ್ಲಿನ ವೈದ್ಯಾಧಿಕಾರಿ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯ ಸಿಬ್ಬಂದಿ ಹಾಗೂ ವಸತಿ ಸೌಕರ್ಯ ಒದಗಿಸಲು ಸರ್ಕಾರ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರೂ ದೂರಿದ್ದಾರೆ.
ಈ ಆರೋಗ್ಯ ಕೇಂದ್ರಕ್ಕೆ ಶಿಗ್ಗಾಂವಿ ಆಸ್ಪತ್ರೆ ವ್ಯಾಪ್ತಿಯ ಹಲವಾರು ಗ್ರಾಮಗಳನ್ನೂ ದುಂಡಶಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ದುಂಡಶಿ, ಹೊಸೂರ, ಶೀಲವಂತ ಸ್ವಾಮಾಪುರ, ಬಿ. ಬಸಾಪುರ, ಅರಟಾಳ ಮುಂತಾದ ಗ್ರಾಮಗಳು ಈ ಕೇಂದ್ರದ ವ್ಯಾಪ್ತಿಗೆ ಬರುತ್ತಿವೆ. ಆದರೆ, ಅಗತ್ಯ ಸಿಬ್ಬಂದಿ ನೇಮಿಸಿಲ್ಲ. ಸುಮಾರು 12 ಸಾವಿರಕ್ಕೂ ಹೆಚ್ಚು ಜನಸಂಖ್ಯೆಗೆ ಈಗ ಆರೋಗ್ಯ ಸೇವೆ ಒದಗಿಸುವುದೇ ಕಷ್ಟವಾಗಿದೆ.
ವಿಶಾಲವಾದ ಆವರಣ
ಆರೋಗ್ಯ ಕೇಂದ್ರಕ್ಕೆ ಎರಡು ಎಕರೆಗೂ ಮಿಕ್ಕಿ ಜಾಗೆ ಇದೆ. ಇಲ್ಲಿ ವೈದ್ಯಾಧಿಕಾರಿಗಳು, ಓರ್ವ ಮಹಿಳಾ ಆರೋಗ್ಯ ಸಹಾಯಕಿ, ಡಿ ವರ್ಗದ ಸಿಬ್ಬಂದಿ ವರ್ಗಕ್ಕೆ ವಸತಿ ಗೃಹಗಳಿವೆ. ಆದರೆ, ಅವು ಈಗಲೋ ಇನ್ನೊಂದು ಸ್ವಲ್ಪ ಹೊತ್ತಿಗೋ ಬೀಳುವಂತಿವೆ. ಅವುಗಳಲ್ಲಿ ವಾಸಿಸಲು ಯಾರೂ ಧೈರ್ಯ ಮಾಡುವುದಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಕ್ರಮ ಜರುಗಿಸಿಲ್ಲ. ಆಸ್ಪತ್ರೆಯ ಒಂದು ಭಾಗದಲ್ಲಿ ಓರ್ವ ಡಿ ದರ್ಜೆಯ ಮಹಿಳಾ ಸಿಬ್ಬಂದಿ ಇದ್ದರೆ, ಇಬ್ಬರು ಮಹಿಳಾ ಆರೋಗ್ಯ ಸಹಾಯಕಿಯರೂ ಇಲ್ಲೇ ವಸತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ದೃಶ್ಯ ಕರುಳು ಹಿಂಡುವಂತಿದೆ.
ಆಸ್ಪತ್ರೆ ಆವರಣದಲ್ಲೇ ಒಂದು ಕೊಳವೆ ಬಾವಿ ಇದೆ. ಇದಕ್ಕೆ ವಿದ್ಯುತ್ ಪಂಪ್ ಆಳವಡಿಸಲಾಗಿದೆ. ಆದರೆ, ಅದು ಹಾಳಾಗಿದ್ದು, ಈಗ ಸ್ವಚ್ಛತೆ ಹಾಗೂ ಕುಡಿಯುವ ನೀರಿಗೆ ಗ್ರಾಪಂ ನಲ್ಲಿಗಳನ್ನೇ ಕಾಯುವಂತಾಗಿದೆ. ಈ ಆಸ್ಪತ್ರೆಗೆ ಒಂದು ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸುವುದೂ ಅಗತ್ಯವಾಗಿದೆ.
ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಲಕ್ಷಾಂತರ ಬೆಲೆಬಾಳುವ ಸಾಮಗ್ರಿಗಳು ಇದ್ದು, ರಾತ್ರಿ ವೇಳೆ ಕಾವಲುಗಾರನಿಲ್ಲ. ಆಸ್ಪತ್ರೆಯಲ್ಲಿರುವ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಸೂಕ್ತ ರಕ್ಷಣೆ ದೃಷ್ಟಿಯಿಂದ ಅಧಿಕಾರಿಗಳು ಕಾವಲುಗಾರನನ್ನು ನೇಮಕ ಮಾಡುವುದು ಅವಶ್ಯವಾಗಿದೆ.
ಪಾಳುಬಿದ್ದ ಕಟ್ಟಡಗಳು
ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಆವರಣ ಗೋಡೆ ಇದೆ. ಆದರೆ ಆವರಣದಲ್ಲಿರುವ ಸಿಬ್ಬಂದಿ ವಸತಿಗೃಹಗಳು ಪಾಳು ಬಿದ್ದಿವೆ. ಕಳೆಗಿಡಗಳು ಆಳೆತ್ತರಕ್ಕೆ ಬೆಳೆದುನಿಂತಿವೆ. ಅಲ್ಲಲ್ಲಿ ಸಾರಾಯಿ ಬಾಟಲಿಗಳು, ಕಚ್ಚಾ ಸಾಮಗ್ರಿಗಳನ್ನು ಎಸೆದಿದ್ದರಿಂದ ಗಲೀಜಾಗಿದೆ. ಗೇಟಿಲ್ಲದೆ ಜಾನುವಾರುಗಳು ಒಳಬರುತ್ತಿವೆ. ಹೀಗಾಗಿ, ಇದು ಪ್ರಾಥಮಿಕ ಆರೋಗ್ಯ ಕೇಂದ್ರವೋ ಅಥವಾ ರೋಗ ಹರಡುವ ಕೇಂದ್ರವೋ ಎಂಬ ಅನುಮಾನ ಬರುವಂತಿದೆ.
ವೈದ್ಯಾಧಿಕಾರಿ ಸೇರಿ 10 ಸಿಬ್ಬಂದಿಯನ್ನು ಸರ್ಕಾರ ಇಲ್ಲಿಗೆ ನಿಯೋಜಿಸಿದೆ. ಓರ್ವ ವೈದ್ಯಾಧಿಕಾರಿ, ಓರ್ವ ಫಾರ್ಮಸಿಸ್ಟ್, ಇಬ್ಬರು ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು (ಒಂದು ಹುದ್ದೆ ಖಾಲಿ ಇದೆ), ಮೂವರು ಡಿ ಗ್ರೂಪ್ (ಇದರಲ್ಲೂ ಒಂದು ಹುದ್ದೆ ಖಾಲಿ) ನೌಕರರಿದ್ದಾರೆ.
ಆಸ್ಪತ್ರೆಯಲ್ಲಿ ಶವಪರೀಕ್ಷಾ ಕೇಂದ್ರವಿದ್ದರೂ ಕಟ್ಟಡ ಶಿಥಿಲಗೊಂಡಿದೆ. ಹೀಗಾಗಿ, ಶಿಗ್ಗಾಂವಿ ಅಥವಾ ತಡಸಕ್ಕೆ ಶವಗಳನ್ನು ಒಯ್ಯಬೇಕಾದ ಸ್ಥಿತಿ. ಸರ್ಕಾರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಆಸ್ಪತ್ರೆ ಸಿಬ್ಬಂದಿ ಕೊರತೆ ನೀಗಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಿದರೆ, ಇನ್ನಷ್ಟು ಉತ್ತಮ ಆರೋಗ್ಯ ಸೇವೆಯನ್ನು ದುಂಡಶಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಿರೀಕ್ಷಿಸುವುದು ಸಾಧ್ಯ.