ಸಣ್ಣ ಉಳಿತಾಯದ ಮೂಲಕ ಆರ್ಥಿಕ ಭದ್ರತೆ
ಬ್ಯಾಡಗಿ: ಸಣ್ಣ ಉಳಿತಾಯದ ಮೂಲಕ ಆರ್ಥಿಕ ಭದ್ರತೆಯನ್ನು ಉತ್ತಮಪಡಿಸಿಕೊಳ್ಳುವ ಅವಕಾಶವನ್ನು ಅಂಚೆ ಇಲಾಖೆ ಸಾರ್ವಜನಿಕರಿಗೆ ಒದಗಿಸಿದೆ ಎಂದು ಪ್ರತಿನಿಧಿಗಳ ಕಾರ್ಯದರ್ಶಿ ಎಫ್.ಯು. ಬಣಕಾರ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿ ಭಾನುವಾರ ಜರುಗಿದ ಮಹಾತ್ಮ ಗಾಂಧಿ ಸಣ್ಣ ಉಳಿತಾಯ ಯೋಜನೆಯ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರು ಕಡಿಮೆ ಕಂತಿನಲ್ಲಿ ಉಳಿತಾಯದ ಮೂಲಕ ಆರ್ಥಿಕ ಭದ್ರತೆಯನ್ನು ಹೆಚ್ಚಿಸಿಕೊಳ್ಳುವ ಸುವರ್ಣಾವಕಾಶ ಈ ಯೋಜನೆಯಲ್ಲಿದೆ. ತಮ್ಮ ಆದಾಯದ ಸ್ವಲ್ಪ ಹಣವನ್ನು ತೊಡಗಿಸಿದರೂ ಆರ್ಥಿಕ ಸಬಲರಾಗಲು ಸಾಧ್ಯ ಎಂದರು.
ಪ್ರತಿನಿಧಿಗಳು ಸಾರ್ವಜನಿಕರಿಗೆ ಉಳಿತಾಯ ಯೋಜನೆಯ ಸಮಗ್ರ ಲಾಭಾಂಶ ಹಾಗೂ ಪ್ರಯೋಜನಗಳನ್ನು ಮನದಟ್ಟು ಮಾಡುವ ಮೂಲಕ ಉತ್ತಮ ಸೇವೆ ಕಲ್ಪಿಸಬೇಕು. ಇದರಿಂದ ಮತ್ತಷ್ಟು ಸದಸ್ಯರನ್ನು ಯೋಜನೆಗಳಲ್ಲಿ ತೊಡಗಿಸಬಹುದಾಗಿದೆ ಎಂದರು.
ಜಿಲ್ಲಾ ಅಂಚೆ ಕಚೇರಿಯ ಉಪನಿರೀಕ್ಷಕಿ ಕೆ.ಸಿ. ದೀಪಾ, ಇಲಾಖೆ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರ, ಠೇವಣಿ ಯೋಜನೆ, ಉಳಿತಾಯ ಖಾತೆ, ಸ್ಪೀಡ್ ಪೋಸ್ಟ್ ಅನುಕೂಲ ಕಲ್ಪಿಸಿವೆ. ಸಣ್ಣ ಉಳಿತಾಯದ ಮೂಲಕ 10 ರುಪಾಯಿಗಳಿಂದ ಲಕ್ಷದ ವರೆಗೂ ಮಾಸಿಕವಾಗಿ ಜಮೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಇಲ್ಲಿನ ಪ್ರತಿನಿಧಿಗಳು ಹಲವಾರು ವರ್ಷಗಳಿಂದ ಉತ್ತಮ ಸೇವೆಯಲ್ಲಿ ತೊಡಗಿದ್ದಾರೆ. ಹೀಗಾಗಿ ಸಾಕಷ್ಟು ಜನರು ಇಲಾಖೆಯ ಮೇಲೆ ವಿಶ್ವಾಸವಿಟ್ಟು ಹಣ ತೊಡಗಿಸಿದ್ದಾರೆ ಎಂದರು.
ಸಭೆಯಲ್ಲಿ ತಾಲೂಕು ಉಳಿತಾಯ ಯೋಜನೆಯ ಪ್ರತಿನಿಧಿಗಳ ಅಧ್ಯಕ್ಷ ಎಚ್.ಬಿ. ಕೊರಕಲಿ, ಎಸ್.ಬಿ. ಮೂಲೇರ, ಗುರುದೇವರಮಠ, ನಾಗಪ್ಪ ಬಣಕಾರ, ಮುದ್ದಣ್ಣನವರ, ಎಸ್. ಮಾಶಾಳ ಇದ್ದರು.