9ಕ್ಕೆ ಗೋಕಾಕರ ವರ್ಧಂತಿ
ಹಾವೇರಿ: ಡಾ ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಹಾವೇರಿ ಹಾಗೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಡಾ ವಿ.ಕೃ. ಗೋಕಾಕರ 104ನೇ ವರ್ಧಂತಿ ಉತ್ಸವ ಕಾರ್ಯಕ್ರಮ ಆ. 9ರಂದು ಸಂಜೆ 5 ಗಂಟೆಗೆ ಧಾರವಾಡದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಲಿದೆ. ಗೋಕಾಕ ಟ್ರಸ್ಟ್ ಅಧ್ಯಕ್ಷ ನಾಡೋಜ ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದು, ಬೆಳಗಾವಿಯ ಹಿರಿಯ ಕವಿ ಜಿನದತ್ತ ದೇಸಾಯಿ 'ನನ್ನ ಗುರು ಗೋಕಾಕರು', ಧಾರವಾಡ ಖ್ಯಾತ ಕವಿ ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ 'ಗೋಕಾಕರ ಕಾವ್ಯ' ಹಾಗೂ ಮೈಸೂರಿನ ಹಿರಿಯ ಸಾಹಿತಿ ಡಾ ಬಿ.ಬಿ. ರಾಜಪುರೋಹಿತ ಅವರು 'ಗೋಕಾಕರ ಬದುಕು-ಬರಹ' ಕುರಿತು ಉಪನ್ಯಾಸ ನೀಡುವರು. ವಿದುಷಿ ಜಯದೇವಿ ಜಂಗಮಶೆಟ್ಟಿ ಅವರಿಂದ ಗೋಕಾಕರ ಗೀತಗಾಯನ ಕಾರ್ಯಕ್ರಮ ಜರುಗಲಿದೆ.
ನಾಳೆ ಕಾನೂನು ಸಾಕ್ಷರತೆ
ಹಾವೇರಿ: ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಎನ್ನೆಸ್ಸೆಸ್ ಘಟಕದ ಆಶ್ರಯದಲ್ಲಿ ಮಾದಕ ಪದಾರ್ಥ ಮತ್ತು ಲೈಂಗಿಕ ಶೋಷಣೆ ಹಾಗೂ ಮಕ್ಕಳ ಸಾಗಣೆ ತಡೆಗಟ್ಟುವ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಆ. 7ರಂದು ಬೆಳಗ್ಗೆ 9.30ಕ್ಕೆ ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಎಚ್.ಪಿ. ಸಂದೇಶ ಉದ್ಘಾಟಿಸಲಿದ್ದು, ಪ್ರಾಚಾರ್ಯ ಡಾ ಬಿ.ಸಿ. ಬನ್ನೂರ ಅಧ್ಯಕ್ಷತೆ ವಹಿಸುವರು. ಎಸ್ಪಿ ಎನ್. ಶಶಿಕುಮಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಹುದ್ದಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸಿ.ಎನ್. ಹೊಳಿಹೊಸೂರ ಪಾಲ್ಗೊಳ್ಳುವರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಬಸವರಾಜ ಸಜ್ಜನರ ಉಪನ್ಯಾಸ ನೀಡುವರು. ವಕೀಲರ ಸಂಘದ ಕಾರ್ಯದರ್ಶಿ ಎಸ್.ಎಸ್. ಹಿರೇತನದ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ ಜಗದೀಶ ಎಫ್. ಹೊಸಮನಿ ಇರುವರೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎನ್.ಎಸ್. ಪಾಟೀಲ ತಿಳಿಸಿದ್ದಾರೆ.
ನಾಳೆಯಿಂದ ಪುರಾಣ ಪ್ರವಚನ
ರಾಣಿಬೆನ್ನೂರು: ಶ್ರಾವಣ ಮಾಸದ ಅಂಗವಾಗಿ ಗಂಗಾಪುರ ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಹಾಗೂ ಸಂಗಮೇಶ್ವರ ಮಠದಲ್ಲಿ ಆ. 7ರಿಂದ ಸೆ. 6ರ ವರೆಗೆ ಮಹಾ ಶರಣೆ ಇಟಗಿ ಭೀಮಾಂಬಿಕಾ ದೇವಿಯ ಪುರಾಣ ಪ್ರವಚನ ನಡೆಸಲು ಮಠದ ಸಮಿತಿ ನಿರ್ಧರಿಸಿದೆ. ಆ. 7ರಿಂದ ಪ್ರತಿ ದಿನ ಸಂಜೆ 7ರಿಂದ ರಾತ್ರಿ 9ರ ವರೆಗೆ ನಡೆಯುವ ಇಟಗಿ ಭೀಮಾಂಬಿಕಾ ದೇವಿಯ ಪುರಾಣ ಪ್ರವಚನವನ್ನು ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕು ಲಿಂಗನಾಯಕನಹಳ್ಳಿ ಜಂಗಮ ಸುಕ್ಷೇತ್ರ ಮಠದ ಚನ್ನವೀರ ಮಹಾಸ್ವಾಮಿಗಳು ಹಾಗೂ ಹಾವೇರಿ ತಾಲೂಕು ಚನ್ನೂರಿನ ಶಿವಬಸವಯ್ಯ ಶಾಸ್ತ್ರಿಗಳು ಹಿರೇಮಠ ನಡೆಸಿಕೊಡುವರು ಎಂದು ಪುರಾಣ ಮತ್ತು ಮಠದ ಟ್ರಸ್ಟ್ ಸಮಿತಿಯ ಕಾರ್ಯದರ್ಶಿ ವಿ.ವಿ. ಹರಪನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--