ಇಂದು ಮೂಕಪ್ಪ ಶ್ರೀ ಪುಣ್ಯಾರಾಧನೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಆ. 5
ವೃಷಭಗಳು (ಎತ್ತುಗಳು) ಸಮಾಜದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತವೆ ಎನ್ನುವುದು ಎಂತಹವರಿಗೂ ಸೋಜಿಗದ ವಿಷಯ. ಆದರೆ ಅವುಗಳ ಪ್ರಯತ್ನದ ಫಲವಾಗಿ ತಾಲೂಕಿನ ಗುಡ್ಡದ ಮಲ್ಲಾಪುರ ಗ್ರಾಮದಲ್ಲಿ ಸ್ಥಾಪಿತವಾದ ದಾಸೋಹ ಮಠವೊಂದು ಪವಾಡ ಸದೃಶ ರೀತಿಯಲ್ಲಿ ನಿತ್ಯ ಅನ್ನದಾಸೋಹ ಮುಂತಾದ ಧಾರ್ಮಿಕ ಪರಂಪರೆ ಶತಮಾನಗಳಿಂದ ನಡೆಯುತ್ತಿದೆ.
ಇಬ್ಬರು ಶ್ರೀಗಳು ಪಟ್ಟಾಧಿಕಾರವನ್ನು ಪಡೆದಿದ್ದು, ಇವರಲ್ಲಿ ಒಬ್ಬರಾದ ಕಿರಿಯ ಮೂಕಪ್ಪ ಶ್ರೀಗಳು ಜು. 30ರಂದು ಲಿಂಗೈಕ್ಯರಾದರು. ಸಾವಿರಾರು ಭಕ್ತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಈಗ ಆ. 6ರಂದು ಶ್ರೀಮಠದಲ್ಲಿ ಪುಣ್ಯತಿಥಿ ಕಾರ್ಯಕ್ರಮ ನಡೆಯಲಿದೆ.
ಆಂಧ್ರಪ್ರದೇಶದ ರಾಚೋಟಿ ಗ್ರಾಮದ ಮಲ್ಲಯ್ಯನ ಗರ್ಭದಲ್ಲಿ ಜನಿಸಿದ ಶ್ರೀ ಅಜ್ಜಯ್ಯ ಸ್ವಾಮಿಗಳು ಶ್ರೀಶೈಲ ಮಲ್ಲಿಕಾರ್ಜುನನ ಪರಮಾಪ್ತ ಭಕ್ತರಲ್ಲಿ ಒಬ್ಬರು. ಎಂಟನೇ ವಯಸ್ಸಿನಲ್ಲಿಯೇ ಧರ್ಮದೀಕ್ಷೆ ಪಡೆದು ಮಲ್ಲಿಕಾರ್ಜುನ ಶಿವಾಚಾರ್ಯರಲ್ಲಿ ಅಭ್ಯಾಸ ನಡೆಸಿದರು. ಬಳಿಕ ಲೋಕಕಲ್ಯಾಣಕ್ಕಾಗಿ ಹಲವಾರು ವರ್ಷಗಳ ಕಾಲ ತಪಸ್ಸು ಮಾಡಿ ಸಿದ್ಧಿ ಪಡೆದ ಶ್ರೀಗಳು ಧರ್ಮ ಜಾಗೃತಿ ಉದ್ದೇಶದಿಂದ ದೇಶ ಸಂಚಾರ ಆರಂಭಿಸಿದರು. ಅಂತಿಮವಾಗಿ ಗುಡ್ಡದ ಮಲ್ಲಾಪುರ ಗ್ರಾಮದ ಗುಹೆಯಲ್ಲಿ ನೆಲೆಯೂರಿದ ಶ್ರೀಗಳು ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಲು ಪ್ರಾರಂಭಿಸಿದರು.
ಧರ್ಮ ದೀಕ್ಷೆ
ವೃಷಭಗಳನ್ನೇರಿದ ಅಜ್ಜಯ್ಯ ಸ್ವಾಮಿಗಳು ಊರೂರು ಸುತ್ತುತ್ತಾ ಭಿಕ್ಷಾಟನೆ ಪ್ರಾರಂಭಿಸಿದರು. ದೇಹ ಬಿಡುವ ಮುನ್ನ ಜೀವಂತ ಸಮಾಧಿಯಾಗಲು ನಿರ್ಧರಿಸಿದ ಶ್ರೀಗಳು ತಮ್ಮ ಜತೆಯಲ್ಲಿದ್ದ ವೃಷಭಗಳಿಗೆ (ಕಂಟಲೆ ಬಸವಣ್ಣ) ಕರ್ಣದಲ್ಲಿ ಷಟ್ಸ್ಥಲ ಬ್ರಹ್ಮೋಪದೇಶದೊಂದಿಗೆ ಗುರುದೀಕ್ಷೆ ನೀಡುವ ಮೂಲಕ ಉತ್ತರಾಧಿಕಾರದ ಧರ್ಮದಂಡವನ್ನು ನೀಡಿರುವುದಾಗಿ ಇಂದಿಗೂ ಪ್ರತೀತಿ.
ದಾಸೋಹ ಮಠ: ವಿಶ್ವವೇ ಕಂಡರಿಯದ ವಿಶಿಷ್ಟ ಪರಂಪರೆಗೆ ನಾಂದಿ ಹಾಡಿದ ಮೂಕಪ್ಪ ಶಿವಯೋಗಿಗಳು ಶ್ರೀಮಠದಲ್ಲಿ ನಿತ್ಯ ಅನ್ನದಾಸೋಹ ಆರಂಭಿಸಿದರು. ಭಕ್ತರ ಮನೆಯಲ್ಲಿ ತಂಗುವ ಶ್ರೀಗಳು ಅವರ ಇಷ್ಟಾರ್ಥಗಳನ್ನು ಈಡೇರಿಸಿ ಸಂಕಷ್ಟ ಪರಿಹರಿಸುತ್ತಾರೆ. ಅವರು ನೀಡುವ ಕಾಣಿಕೆಯಿಂದ ಅನ್ನದಾಸೋಹ ಮುಂದುವರೆಸಿಕೊಂಡು ಬಂದಿದ್ದಾರೆ. ಹೀಗಾಗಿ ರಾಜ್ಯದಲ್ಲಷ್ಟೇ ಅಲ್ಲ, ಸಮೀಪದ ಆಂಧ್ರ, ಗೋವಾ, ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿಯೂ ಭಕ್ತ ಸಮೂಹವನ್ನು ಶ್ರೀಗಳು ಹೊಂದಿದ್ದಾರೆ.
ಪುನರ್ಜನ್ಮ: ಮೂಕಪ್ಪ ಶಿವಯೋಗಿಗಳು ಲಿಂಗೈಕ್ಯರಾದ ಕೆಲ ದಿನಗಳಲ್ಲಿ ಯಾವುದಾದರೂ ಒಂದು ಗೋಗರ್ಭದಲ್ಲಿ ಪುನರ್ಜನ್ಮ ಪಡೆದುಕೊಳ್ಳುತ್ತಾರೆ. ನವಜಾತ ಕರು ತಾಯಿ ಹಾಲು ಸ್ವೀಕರಿಸುವುದಿಲ್ಲ. ಅವರೇ ಸಾಕ್ಷಾತ್ ಮೂಕಪ್ಪ ಶಿವಯೋಗಿಗಳು. ಇಂತಹ ಸುದ್ದಿ ಪಡೆವ ಧರ್ಮಾಧಿಕಾರಿಗಳು ಅಲ್ಲಿಗೆ ತೆರಳಿ ಪೂಜಾ ವಿಧಿವಿಧಾನಗಳ ನಡೆಸಿದ ಬಳಿಕವೇ ಕರು ಹಾಲು ಸೇವಿಸುತ್ತದೆ. ಕೆಲ ದಿನಗಳ ಬಳಿಕ ಕರುವಿನ ರೂಪದಲ್ಲಿರುವ ಮೂಕಪ್ಪ ಸ್ವಾಮಿಗಳನ್ನು ಶ್ರೀಮಠಕ್ಕೆ ಕರೆತಂದು ಪಟ್ಟಾಭಿಷೇಕ ಮಾಡಲಾಗುತ್ತದೆ. ಈ ಪರಂಪರೆ ಇಂದಿಗೂ ನಡೆದು ಬಂದಿದೆ.
ಮಠದಲ್ಲಿ ವೀರಶೈವ ಪರಂಪರೆ ಮುಂದುವರೆದಿದ್ದರೂ ಸರ್ವಧರ್ಮಗಳ ಸಂಗಮವಾಗಿದೆ. ಈಗ ಪರಂಪರೆಗಳ ಹಿಂದಿನ ಮೂಕಪ್ಪ ಶ್ರೀಗಳು ಹಿರೇಕೆರೂರ ತಾಲೂಕಿನ ಸಾತೇನಹಳ್ಳಿ ಗ್ರಾಮದ ಮುಸ್ಲಿಮರ ಮನೆಯಲ್ಲಿ ಜನಿಸಿದರು. ಮೂಕಪ್ಪ ಶ್ರೀಗಳು ನಿತ್ಯ ತ್ರಿಕಾಲ ಪೂಜೆ ನಡೆಸುತ್ತಾರೆ, ಆಮೇಲೆ ಪ್ರಸಾದ ಸ್ವೀಕರಿಸುತ್ತಾರೆ. ಮಂಗಳವಾರ ನಡೆಯಲಿರುವ ಪ್ರಥಮ ಪುಣ್ಯಸರಣೆ ಕಾರ್ಯಕ್ರಮದಲ್ಲಿ ನಾಡಿನ ಹರಗುರು ಚರಮೂರ್ತಿಗಳು ಹಾಗೂ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.
- ಶಿವಾನಂದ ಮಲ್ಲನಗೌಡರ