ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಟ್ಟಡ ಉರುಳಿಸಿ ಪ್ರಾಣ ಉಳಿಸಿ!

Lingaraj Badiger
Updated On : 6 Aug 2013, 12:01 pm

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 5
ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಪಶು ಆಸ್ಪತ್ರೆಯನ್ನು ಶೀಘ್ರವೇ ನೆಲಸಮ ಮಾಡದಿದ್ದರೆ ಈ ಕಟ್ಟಡದ ಹತ್ತಿರ ಸುಳಿದಾಡುವ ದನಕರುಗಳು ಅಥವಾ ಮನುಷ್ಯರು ಪ್ರಾಣ ಕಳೆದುಕೊಳ್ಳುವುದು ಖಂಡಿತ.
60 ವರ್ಷದ ಹಿಂದೆ ಕಟ್ಟಿರುವ ಹಾಗೂ ಅಪಾಯದಂಚಿನಲ್ಲಿರುವ ಈ ಕಟ್ಟಡವನ್ನು ನೆಲಸಮ ಮಾಡಬೇಕೆಂದು ತುಮ್ಮಿನಕಟ್ಟಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು 10 ವರ್ಷಗಳಿಂದ ಸಂಬಂಧಿಸಿದ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಮಾಡುತ್ತಲೇ ಇದ್ದರೂ ಈ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ. ಕೆಡವಲು ಆಗದಿದ್ದರೆ ಈ ಕಟ್ಟಡದ ಸುತ್ತ ರಕ್ಷಣಾ ಬೇಲಿಯನ್ನಾದರೂ ನಿರ್ಮಿಸಬೇಕೆಂದು ಗ್ರಾಮಸ್ಥರು, ರೈತರು ಆಗ್ರಹಿಸುತ್ತಿದ್ದಾರೆ.
ತಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಸವರಾಜ ಕೆಲಗಾರ ತುಮ್ಮಿನಕಟ್ಟಿ ಗ್ರಾಮದ ನಿವಾಸಿ. ಅವರು ತಮ್ಮ ಅಧಿಕಾರಾವಧಿಯಲ್ಲಿ ನಡೆದ ಸಾಮಾನ್ಯ ಸಭೆಗಳಲ್ಲಿ ಮತ್ತು ಕೆಡಿಪಿ ಸಭೆಯಲ್ಲಿ ಅಪಾಯದಂಚಿನಲ್ಲಿರುವ ಈ ಕಟ್ಟಡದ ಕುರಿತು ಪ್ರಸ್ತಾಪಿಸುತ್ತಲೇ ಇದ್ದರು. ಶಾಸಕರಾಗಿದ್ದ ಜಿ. ಶಿವಣ್ಣನವರು ನಡೆಸಿದ ತ್ರೈಮಾಸಿಕ ಕೆಡಿಪಿ ಸಭೆಗಳಲ್ಲೂ ಸಾರ್ವಜನಿಕರ ಮತ್ತು ರೈತರ ಹಿತದೃಷ್ಟಿಯಿಂದ ಈ ಕಟ್ಟಡ ಕೆಡವಬೇಕೆಂದು ಸೂಚನೆ ನೀಡಿದ್ದರು.
20 ದಿನಗಳಿಂದೀಚೆಗೆ ತಾಲೂಕಿನಾದ್ಯಂತ ಜಿಟಿ-ಜಿಟಿಯಾಗಿ ಮಳೆ ಸುರಿಯುತ್ತಿದ್ದು, ಈ ಕಟ್ಟಡದ ಕೆಲವು ಭಾಗ ಕುಸಿದಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಇಂದೋ-ನಾಳೆಯೋ ಬೀಳುವ ಹಂತದಲ್ಲಿರುವ ಕಟ್ಟಡವನ್ನು ಶೀಘ್ರದಲ್ಲಿ ಇಲಾಖೆ ಅಥವಾ ಗ್ರಾಪಂ ನೆಲಸಮಗೊಳಿಸದಿದ್ದರೆ ಹೋರಾಟ ನಡೆಸುವುದಾಗಿ ಜನತೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಆದೇಶ ಬೇಕು
ಅಪಾಯದ ಅಂಚಿನಲ್ಲಿರುವ, ಸಂಪೂರ್ಣ ಹಾಳಾಗಿರುವ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಈ ಪಶು ಆಸ್ಪತ್ರೆ ಹಳೆಯ ಕಟ್ಟಡ ಜನವಸತಿ ಸಮೀಪದಲ್ಲಿದೆ. ಅದನ್ನು ನೆಲಸಮಗೊಳಿಸುವಂತೆ ವಿನಂತಿಸಿ, 3 ವರ್ಷಗಳಿಂದ ಹಾವೇರಿಯ ಜಿಲ್ಲಾ ಪಶು ಆಸ್ಪತ್ರೆಯ ಉಪ ನಿರ್ದೇಶಕರಿಗೆ ಹಲವಾರು ಪತ್ರ ಬರೆಯಲಾಗಿತ್ತು. ಸರ್ಕಾರಿ ಕಟ್ಟಡ ನೆಲಸಮಗೊಳಿಸಲು ಇಲಾಖೆಗೆ ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಬೇಕು. ಈ ಕುರಿತು ಜಿಲ್ಲಾ ಪಶು ಆಸ್ಪತ್ರೆ ಉಪ ನಿರ್ದೇಶಕರಿಗೂ ಪತ್ರ ಬರೆಯಲಾಗಿದೆ. ಆದರೆ. ಕಟ್ಟಡ ನೆಲಸಮಗೊಳಿಸುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇದೆ. ಅವರು ಸಮಸ್ಯೆ ಅರಿತು ಶೀಘ್ರ ಜಿಪಂ ಎಂಜಿನಿಯರಿಂಗ್ ವಿಭಾಗಕ್ಕೆ ಈ ಕುರಿತು ಸೂಚಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಾಲೂಕು ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಪರಮೇಶ ಎನ್. ಹುಬ್ಬಳ್ಳಿ ತಿಳಿಸಿದರು.
ಜಿಪಂಗೆ ಅಧಿಕಾರ ಕೊಡಿ
ತುಮ್ಮಿನಕಟ್ಟಿ ಗ್ರಾಮಸ್ಥರು ಹಾಗೂ ತಾಪಂ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರೂ ಆಗಿರುವ ಬಸವರಾಜಪ್ಪ ಕೆಲಗಾರ ಅವರನ್ನು ಕೇಳಿದಾಗ, ಸುಮಾರು 60 ವರ್ಷ ಹಳೆಯದಾಗಿರುವ ಪಶು ಆಸ್ಪತ್ರೆಯ ಈ ಕಟ್ಟಡದ ಸೋರುತ್ತಿದ್ದ ಕಾರಣ, 10 ವರ್ಷಗಳ ಹಿಂದೆ ಈ ಕಟ್ಟಡದಿಂದ ಸ್ಪಲ್ಪ ದೂರದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿತ್ತು. ಹಳೆಯ ಕಟ್ಟಡ ಹಾಳಾಗಿದ್ದು, ಉಪಯೋಗಕ್ಕೆ ಬರುವಂತಿಲ್ಲ. ಜನವಸತಿ ಪ್ರದೇಶದಲ್ಲಿರುವ, ಜೀರ್ಣಾವಸ್ಥೆಯಲ್ಲಿರುವ ಸದರಿ ಕಟ್ಟಡವನ್ನು ನೆಲಸಮಗೊಳಿಸಲು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಬೇಕೆಂದು ತಾಪಂ ಸಭೆಗಳಲ್ಲಿ ಹಲವಾರು ಬಾರಿ ಚರ್ಚಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ. ಜಿಲ್ಲಾಧಿಕಾರಿಗಳು ಕಟ್ಟಡ ನೆಲಸಮಗೊಳಿಸಲು ಜಿಪಂಗೆ ಅಧಿಕಾರ ನೀಡಬೇಕೆಂದು ವಿನಂತಿಸಿದ್ದಾಗಿ ತಿಳಿಸಿದರು.
ಸ್ವಾ ಕರವೇ ಮನವಿ: 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹಾಗೂ 30 ಸಾವಿರಕ್ಕೂ ಅಧಿಕ ದನಕರುಗಳಿರುವ ತುಮ್ಮಿನಕಟ್ಟಿ ಗ್ರಾಮದ ಪಶು ವೈದ್ಯ ಆಸ್ಪತ್ರೆಯ ಆವರಣದಲ್ಲಿರುವ ತುಂಬಾ ಹಳೆಯದಾದ ಈ ಕಟ್ಟಡದ ಸುತ್ತ-ಮುತ್ತ ನಿತ್ಯ ದನಕರುಗಳು ಹಾಗೂ ಸಾರ್ವಜನಿಕರು ಓಡಾಡುತಿದ್ದು, ಅಪಾಯ ಸಂಭವಿಸುವ ಮುನ್ನವೇ ಕಟ್ಟಡವನ್ನು ನೆಲಸಮ ಮಾಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಶು ಆಸ್ಪತ್ರೆಯ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ಸ್ವಾಭಿಮಾನಿ ಕರವೇ ತುಮ್ಮಿನಕಟ್ಟಿ ಗ್ರಾಮ ಘಟಕದ ಅಧ್ಯಕ್ಷ ಮಡಿವಾಳಪ್ಪ ಮಡಿವಾಳರ, ಸಂಘಟನಾ ಕಾರ್ಯದರ್ಶಿ ಪರಸಪ್ಪ ಶೆಟ್ಟೇರ, ಜಿಲ್ಲಾ ಕಾರ್ಯಾಧ್ಯಕ್ಷ ಸಿದ್ದಾರೂಢ ಗುರಂ ತಿಳಿಸಿದರು.
-ಸಾಬ್ಜನ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement