ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗೋವಿನಜೋಳಕ್ಕೆ ಹಾನಿ: ಪರಿಶೀಲನೆಗೆ ರೈತರ ಆಗ್ರಹ

Lingaraj Badiger
Updated On : 6 Aug 2013, 12:01 pm

ಹಾನಗಲ್ಲ: ಅತಿವೃಷ್ಟಿಯಿಂದಾಗಿ ತಾಲೂಕಿನಾದ್ಯಂತ ಗೋವಿನ ಜೋಳದ ಪೈರು ಹಾಳಾಗಿದ್ದು, ತಕ್ಷಣ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸೋಮವಾರ ತಹಸೀಲ್ದಾರ್‌ಗೆ ಮನವಿ ಅರ್ಪಿಸಿವೆ.
ತಾಲೂಕಿನಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಗೋವಿನಜೋಳ ಬೆಳೆ ನೆಲಕಚ್ಚಿದೆ. ಒಂದು ತಿಂಗಳಿನಿಂದ ಸುರಿಯುತ್ತಿರುವ ಭಾರಿ ಮಳೆಗೆ ಜವುಳು ಹಿಡಿದು ಗೋವಿನಜೋಳದ ಪೈರು ಕೊಳೆಯುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಮಳೆ ಬಿದ್ದುದರಿಂದ ಇಳುವರಿಯೂ ಕಡಿಮೆಯಾಗುತ್ತದೆ. ಇದರಿಂದ ರೈತ ಸಮುದಾಯ ಆತಂಕಕ್ಕೀಡಾಗಿದೆ. ತಕ್ಷಣ ತಾಲೂಕು ಆಡಳಿತ ಸಮಗ್ರ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ಕೃಷಿ ವರ್ಷದ ಬೆಳೆವಿಮೆ ಪರಿಹಾರ ಬಿಡುಗಡೆ ಆಗಿರುವುದಾಗಿ ವರದಿಯಾಗಿದ್ದರೂ ಇದುವರೆಗೆ ರೈತರ ಖಾತೆಗಳಿಗೆ ಹಣ ಜಮೆ ಆಗಿಲ್ಲ. ಕೂಡಲೇ ಅಧಿಕಾರಿಗಳು ಹಾಗೂ ಬ್ಯಾಂಕುಗಳಿಗೆ ನಿರ್ದೇಶನ ನೀಡಿ ಈ ತಿಂಗಳು ಕೊನೆಯೊಳಗಾಗಿ ಹಣ ಬಿಡುಗಡೆ ಮಾಡುವಂತೆ ಸೂಚಿಸಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆಸಾಲ ನೀಡಲು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ತಾಲೂಕಿನಲ್ಲಿ ಸತತ ಎರಡು ವರ್ಷಗಳ ಬರಗಾಲ ಎದುರಿಸಿದ ರೈತರ ಹಳೆಯ ಬೆಳೆ ಸಾಲವನ್ನು ಐದು ಕಂತುಗಳಲ್ಲಿ ಮರುಪಾವತಿಗೆ ವ್ಯವಸ್ಥೆ ಮಾಡಬೇಕು. ಹೊಸ ಬೆಳೆಸಾಲ ನೀಡಲು ಸರಳ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಮಹಲಿಂಗಪ್ಪ ಅಕ್ಕಿವಳ್ಳಿ, ಸಂಚಾಲಕ ಚನಬಸಪ್ಪ ಅಕ್ಕಿವಳ್ಳಿ, ಸಂಘಟನಾ ಕಾರ್ಯದರ್ಶಿ ಅಡಿವೆಪ್ಪ ಆಲದಕಟ್ಟಿ, ರೈತ ಮುಖಂಡರಾದ, ವಾಸುದೇವ ಕಮಾಟಿ, ಮಲ್ಲೇಶಪ್ಪ ಪರಪ್ಪನವರ, ಬಸಪ್ಪ ಕಾರೇರ, ಸೋಮಪ್ಪ ಜಡೆಗೊಂಡರ, ಮಂಜುನಾಥ ಅವಲಗೇರಿ, ರಾಜೇಂದ್ರಪ್ಪ ಗಾಳಪೂಜಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement