ಜಿಲ್ಲಾದ್ಯಂತ ಮಳೆ ಕ್ಷೀಣ
ಹಾವೇರಿ: ಜಿಲ್ಲಾದ್ಯಂತ ಮಳೆ ಕ್ಷೀಣವಾಗಿದೆ. ಭಾನುವಾರ ಸರಾಸರಿ 2.9 ಮಿ.ಮೀ. ಮಳೆಯಾಗಿದ್ದರೆ, ಸೋಮವಾರ ಅದು ಕೇವಲ 1.3 ಮಿ.ಮೀ.ಗೆ ಇಳಿದಿತ್ತು. ಹಾವೇರಿಯಲ್ಲಿ 0.6 ಮಿ.ಮೀ., ಬ್ಯಾಡಗಿ 4, ರಾಣಿಬೆನ್ನೂರು 2.3, ಹಿರೇಕೆರೂರು 0.4, ಶಿಗ್ಗಾಂವಿ 0.6 ಹಾಗೂ ಹಾನಗಲ್ಲಿನಲ್ಲಿ 1 ಮಿ.ಮೀ. ಮಳೆಯಾಗಿದೆ. ಸವಣೂರಲ್ಲಿ ಮಳೆಯಾಗಿಲ್ಲ.
ನೌಕರರ ಸಂಘಕ್ಕೆ ಆಯ್ಕೆ
ಹಾನಗಲ್ಲ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾನಗಲ್ಲ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಡಿ. ಚಂದ್ರಶೇಖರ ಅಧ್ಯಕ್ಷರಾಗಿ, ಬಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗುರುರಾಜ ಹುಚ್ಚಣ್ಣನವರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೊಪ್ಪರಸಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಜಿ. ಪಾಟೀಲ ಕಾರ್ಯದರ್ಶಿಯಾಗಿ, ಕಂದಾಯ ಇಲಾಖೆಯ ಸಿ.ಎಸ್. ಜಾಧವ ರಾಜ್ಯ ಪರಿಷತ್ ಸದಸ್ಯರಾಗಿ, ಆರೋಗ್ಯ ಇಲಾಖೆಯ ಸಂಜೀವ ಕುಲಕರ್ಣಿ ಖಜಾಂಚಿಯಾಗಿ, ಆರ್.ಕೆ. ಭೋಸಲೆ ಹಾಗೂ ಬಿ.ಆರ್. ಸುಣಗಾರ ಸಂಘಟನಾ ಕಾರ್ಯದರ್ಶಿ, ಮಹದೇವ ತಳಗೇರಿ ಸಾಂಸ್ಕೃತಿಕ ಕಾರ್ಯದರ್ಶಿ, ಸಂತೋಷ ಲೋಂಡೆ ಲೆಕ್ಕ ಪರಿಶೋಧಕರಾಗಿ ನೇಮಕವಾಗಿರುವುದಾಗಿ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರ ತಿಳಿಸಿದ್ದಾರೆ.