ನೀರು, ಶೌಚಾಲಯ, ಪಾರ್ಕಿಂಗ್ ಸೌಲಭ್ಯ ಕಲ್ಪಿಸಿ
ಹಿರೇಕೆರೂರ: ಹಿರೇಕೆರೂರು ಪಟ್ಟಣದಲ್ಲಿ ಗ್ರಾಮಗಳಿಂದ ಬಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯಗಳು ಹಾಗೂ ವಾಹನ ನಿಲುಗಡೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ಕರವೇ ತಾಲೂಕು ಘಟಕ ಕಾರ್ಯಕರ್ತರು ಪಟ್ಟಣ ಪಂಚಾಯತ್ ಎದುರು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಕರವೇ ತಾಲೂಕು ಘಟಕದ ಅದ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಹಾವೇರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಅತಿ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿರೇಕೆರೂರು ಪಟ್ಟಣ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ತಾಲೂಕಿನ 126 ಗ್ರಾಮಗಳಿಂದ ಕಚೇರಿ ಕೆಲಸಗಳಿಗಾಗಿ ದಿನ ನಿತ್ಯ ಜನತೆ ಬರುತ್ತಾರೆ. ಆದರೆ ಇಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಾಹನ ನಿಲುಗಡೆ ಸೌಲಭ್ಯಗಳು ಇಲ್ಲದೆ ಪರದಾಡುತ್ತಾರೆ. ಬಸ್ ನಿಲ್ದಾಣವನ್ನು ಬಿಟ್ಟರೆ ಬೇರೆಲ್ಲೂ ಮೂತ್ರ ವಿಸರ್ಜನೆಗೆ ಅನುಕೂಲವಿಲ್ಲದೆ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ತಕ್ಷಣ ಪಟ್ಟಣ ಪಂಚಾಯತಿ ವತಿಯಿಂದ ಈ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕರವೇ ವಕ್ತಾರ ಶಿವಾನಂದ ಪೂಜಾರ, ರಟ್ಟಿಹಳ್ಳಿ ಕರವೇ ಅಧ್ಯಕ್ಷ ಮಂಜುನಾಥ ಮುದಿಯಪ್ಪನವರ, ಮಲ್ಲನಗೌಡ ಪುಟ್ಟಳ್ಳವರ, ಮಲ್ಲಿಕಾರ್ಜುನ ಶಿರಹಟ್ಟಿ, ಹಸನ್ಸಾಬ ಬಳಿಗಾರ, ಹನುಮಂತಗೌಡ ಹಲಗೇರಿ, ಬಿ.ಎಚ್. ಬಣಕಾರ, ಪ್ರದೀಪ ಬಣಕಾರ, ಕಲ್ಲನಗೌಡ ಕರೇಗೌಡ್ರ, ಮಂಜುನಾಥ ಆರಿಕಟ್ಟಿ, ಬೂದೇಶಿ ಹರಿಜನ, ಬಸವರಾಜ ಹೊಸಕಟ್ಟಿ, ಕಲ್ಲೇಶ ಸುಣಗಾರ, ಗಿರೀಶ ಪಾಟೀಲ, ಪ್ರವೀಣ ಹೊಸಮನಿ, ಮುರುಳಿ ಪಾಟೀಲ, ರಾಮಣ್ಣ ಕಡೂರ, ಗಂಗಾಧರ ಮೆಣಸಿನಕಾಯಿ, ಮಲ್ಲೇಶ ಹೊಟ್ಟೇರ, ಈಶ್ವರ ಪುರದಕೇರಿ, ರಾಘು ಉಜ್ಜಪ್ಪಳವರ, ರಮೇಶ ಉಕ್ಕಡಗಾತ್ರಿ, ರಂಗಪ್ಪ ರಟ್ಟಿಹಳ್ಳಿ, ಪ್ರವೀಣ ಜೀನಳ್ಳಿ, ಗಿರೀಶ ಭೋವಿ, ನಾಗರಾಜ ಉಜನಿಪುರ, ಸಂಜೀವ ಹಿತ್ಲಳ್ಳಿ, ಕರಬಸಪ್ಪ ದೊಡ್ಮನಿ, ವೀರನಗೌಡ ಕೊಣನತಲಿ, ಮಂಜು ಹಳ್ಳಳ್ಳಿ, ಕರಬಸಪ್ಪ ತೋಟಗಂಟಿ ಇದ್ದರು.