ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಸಭ್ಯ ವರ್ತನೆ: ಸಾರಿಗೆ ಸಿಬ್ಬಂದಿ ವಿರುದ್ಧ ತಹಸೀಲ್ದಾರ್‌ಗೆ ಮನವಿ

Vishwanath S
Updated On : 7 Aug 2013, 11:03 am

ಹಾನಗಲ್ಲ: ಬಸ್ ಪಾಸ್ ಮಾಡಿಸಿಕೊಂಡು ಶಾಲೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳನ್ನು ಅಸಭ್ಯವಾಗಿ ಹೀಯಾಳಿಸಿ ಪುಕ್ಕಟೆ ಪ್ರಯಾಣ ಮಾಡುವವರಂತೆ ನಿಕೃಷ್ಟವಾಗಿ ದೂರುವ ಸಾರಿಗೆ ಸಂಸ್ಥೆಯ ಕೆಲವು ಬಸ್ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಸಕಾಲಕ್ಕೆ ಬಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಅರ್ಪಿಸಿದರು.
ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಹಾನಗಲ್ಲ ಸಮೀಪದ ಮಲ್ಲಿಗಾರ ಗ್ರಾಮದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹಾನಗಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬರುವ ಅವರೆಲ್ಲ ಅನಿವಾರ್ಯವಾಗಿ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ಬಸ್ ಪಾಸ್ ಮೂಲಕ ಓಡಾಡುವ ವಿದ್ಯಾರ್ಥಿಗಳನ್ನು ಚಾಲಕರು ಹಾಗೂ ನಿರ್ವಾಹಕರು ಹೀಯಾಳಿಸುತ್ತಾರೆ. ನಾವೇನೋ ಪುಕ್ಕಟೆ ಓಡಾಡುತ್ತಿದ್ದೇವೆ ಎಂಬಂತೆ ಮಾತನಾಡುತ್ತಾರೆ ಎಂದು ದೂರಿದ್ದಾರೆ.
ಬಹುತೇಕ ಚಾಲಕರು ಹಾಗೂ ನಿರ್ವಾಹಕರು ಸರಿಯಾಗಿ ಬಸ್ಸುಗಳನ್ನು ನಿಲ್ಲಿಸದೆ, ಬಸ್ ಚಲಿಸುತ್ತಿರುವಾಗಲೇ ಹತ್ತಲು ಹಾಗೂ ಇಳಿಯಲು ಒತ್ತಾಯಿಸುತ್ತಾರೆ. ಕೇಳದಿದ್ದರೆ ಹಾಗೇ ಬಸ್ಸನ್ನು ಓಡಿಸಿಕೊಂಡು ಹೋಗುತ್ತಾರೆ. ಇದರಿಂದ ವಿದ್ಯಾರ್ಥಿಗಳು ಹಲವು ಬಾರಿ ಕೆಳಗೆ ಬಿದ್ದ ಉದಾಹರಣೆಗಳೂ ಇವೆ ಎಂದು ವಿವರಿಸಿದರು.
ಈ ಬಗ್ಗೆ ಹಲವು ಬಾರಿ ಹಾನಗಲ್ಲ ಘಟಕದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿನ ವಿದ್ಯಾರ್ಥಿಗಳಿಗೆ ಇದು ಮಾನಸಿಕ ಹಿಂಸೆಯಾಗಿ ಪರಿಣಮಿಸಿದೆ. ಕೂಡಲೇ ತಹಸೀಲ್ದಾರರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ವಿದ್ಯಾರ್ಥಿ ಪ್ರತಿನಿಧಿಗಳಾದ ಟಿಪ್ಪುಸುಲ್ತಾನ ನಾಯಕವಾಡಿ, ಬಿ.ಎಚ್. ಮಂಜುನಾಥ, ಅಶ್ಫಕ್ ಶೇಖ್, ನಾಗರಾಜ ಕ್ಯಾಲ್ಕೊಂಡ, ಜಗದೀಶ ಕಟ್ಟೀಮನಿ, ಗುತ್ತಮ್ಮ ಎಲ್.ಎಚ್., ಶ್ವೇತಾ ಎಸ್.ಜಿ. ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement