ಆರೋಗ್ಯ ಸಂಪತ್ತು ವೃದ್ಧಿಸಿಕೊಳ್ಳಿ: ಡಾ. ರೆಡ್ಡಿ
ರಾಣಿಬೆನ್ನೂರು: ಉತ್ತಮ ಆರೋಗ್ಯವನ್ನು ಹೊಂದಿರುವ ವ್ಯಕ್ತಿ ದೇಶದ ಸಂಪತ್ತಾಗುತ್ತಾನೆ. ವಿದ್ಯಾರ್ಥಿಗಳು ನಿತ್ಯ ತಮ್ಮ ಆರೋಗ್ಯ ಸಂಪತ್ತನ್ನು ವೃದ್ಧಿಸಿಕೊಳ್ಳಲು ಮುಂದಾಗಬೇಕೆಂದು ತಾಲೂಕು ಪಂಚಾಯತ್ ಇಒ ಡಾ. ನಾಗನಗೌಡ ರೆಡ್ಡಿ ನುಡಿದರು.
ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ. 1ರಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದಲ್ಲಿ ಸಿಗಬಲ್ಲ ಎಲ್ಲ ಭಾಗ್ಯಗಳಲ್ಲಿ ಆರೋಗ್ಯ ಭಾಗ್ಯ ಮಹತ್ವದ್ದು. ಎಲ್ಲರೂ ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಸರ್ಕಾರದ ಸೌಲಭ್ಯವನ್ನು ಪಡೆದು ಉತ್ತಮ ಶಿಕ್ಷಣ ಪಡೆಯಲು ಮುಂದಾಗಬೇಕು. ವಿದ್ಯಾರ್ಥಿಗಳು ಚಟದ ದಾಸರಾಗದೆ ಆರೋಗ್ಯವಂತರಾಗಿ ವಿದ್ಯಾವಂತರಾಗಲು ಮುಂದಾಗಬೇಕೆಂದು ಡಾ. ನಾಗನಗೌಡ ರೆಡ್ಡಿ ತಿಳಿಸಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎ.ಬಿ. ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಇಲಾಖೆ ಕಾರ್ಯಕರ್ತರಾದ ಪರಮೇಶ್ವರಪ್ಪ ದಾಸರ ಉಪನ್ಯಾಸ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಮರಡೆಪ್ಪ ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಗುರುಗಳಾದ ಆರ್.ವೈ. ಹಾಡೋರ, ಸಿಆರ್ಪಿಗಳಾದ ಎಸ್.ಎಚ್. ಮೇಟಿ, ಎಂ.ಕೆ. ಸಾಲಿಮಠ, ಬಿ.ಎ. ಉಮ್ಮನಗೌಡ್ರ, ಯು.ಐ. ಹರಗೋಲ ಮಾತನಾಡಿದರು. ಶಿಕ್ಷಕರಾದ ಕೆ.ಎಸ್. ಮುದಿಗೌಡರ, ಟಿ.ಎಚ್. ಹೊಸಮನಿ ಇದ್ದರು.