ಮಳೆ, ನೆರೆ ಮಧ್ಯೆ ತೀರದ ದಾಹ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 6
ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರೂ ಕುಡಿಯುವ ನೀರಿಗಾಗಿ ಜನತೆ ಹಾಹಾಕಾರ ಇನ್ನೂ ತಪ್ಪಿಲ್ಲ.
ಸ್ಥಳೀಯ ಸಂಸ್ಥೆಗಳ ಬೇಜವಾಬ್ದಾರಿಯೇ ಇದಕ್ಕೆ ಮೂಲ ಕಾರಣ ಎಂದರೆ ತಪ್ಪಿಲ್ಲ. ಮಳೆಯಾಗಿ ನದಿಗಳು ಬೆಳೆ ಹಾಗೂ ಆಸ್ತಿ-ಪಾಸ್ತಿಗೆ ಸಾಕಷ್ಟು ಹಾನಿ ಮಾಡುತ್ತಿವೆ. ಈ ನೀರನ್ನು ಹಿಡಿದಿಟ್ಟುಕೊಳ್ಳಲು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಹೀಗಾಗಿ, ಮುಂದಿನ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಇನ್ನಷ್ಟು ಹೆಚ್ಚಿದರೆ ಆಶ್ಚರ್ಯವೇನೂ ಇಲ್ಲ.
ತುಂಗಭದ್ರಾ-ವರದಾ
ಇಡೀ ಜಿಲ್ಲೆಗೆ ತುಂಗಭದ್ರಾ ಹಾಗೂ ವರದಾ ನದಿಯಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದ್ದು, ಈ ಎರಡೂ ನದಿಗಳು ಈಗ ಮೈದುಂಬಿ ಹರಿಯುತ್ತಿವೆ.
ಮಳೆಗಾಲದ ಪೂರ್ವದಲ್ಲೇ ಕುಡಿಯುವ ನೀರು ಸಂಗ್ರಹಿಸುವುದಕ್ಕಾಗಿ ಸ್ಥಳೀಯ ಸಂಸ್ಥೆಗಳು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದರೆ ಸಾಕಷ್ಟು ಕುಡಿಯುವ ನೀರು ಸಂಗ್ರಹಿಸಿಡಲು ಸಾಧ್ಯವಾಗುತ್ತಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ನದಿಯಲ್ಲಿ ನೀರು ಹೆಚ್ಚಾಗಿ ಪ್ರವಾಹದ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ನದಿ ನೀರನ್ನು ಡ್ಯಾಂಗಳ ಮೂಲಕ ನಿತ್ಯವೂ ಬಿಡಲಾಗುತ್ತಿದೆ. ಈ ನೀರು ರೈತರಿಗೂ ಯಾವುದೇ ಪ್ರಯೋಜನಕ್ಕೆ ಬರುತ್ತಿಲ್ಲ.
ಸತತ ಮಳೆಯಿಂದಾಗಿ ಮೊದಲೇ ಬೆಳೆಗಳು ನೀರಿನಲ್ಲಿ ನಿಂತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಡ್ಯಾಂ ಮೂಲಕ ನೀರು ಬಿಡಲಾಗುತ್ತಿದೆ. ಆದರೆ, ಸದ್ಯ ನೀರು ಬಳಸಿಕೊಳ್ಳಲು ಸ್ಥಿತಿಯಲ್ಲಿ ರೈತರಿಲ್ಲ ಎಂದು ಹೊಸರಿತ್ತಿಯ ರೈತ ಚಂದ್ರುಗೌಡ 'ಕನ್ನಡಪ್ರಭ'ದೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಮಳೆಯ ಆಶ್ರಯ
ವರದಾ ನದಿ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತಿದೆ. ಬೇಸಿಗೆಯಲ್ಲಿ ನೀರಿನ ಬೇರೆ ಸೆಲೆಗಳಿಲ್ಲದೆ ಅದು ಸಂಪೂರ್ಣ ಬತ್ತಿ ಹೋಗಿರುತ್ತದೆ. ಮಳೆಗಾಲದಲ್ಲಿ ನದಿಯಲ್ಲಿ ಸಂಗ್ರಹವಾಗುವ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟಲ್ಲಿ ಬೇಸಿಗೆಯಲ್ಲಿ ಹಾವೇರಿ ತಾಲೂಕಿನ ಜನತೆಗೆ ನಿತ್ಯವೂ ಕುಡಿಯುವ ನೀರು ಪೂರೈಸಲು ಸಾಧ್ಯ.
ಕೊಳವೆ ಬಾವಿಯೇ ಗತಿ
ಮಳೆಗಾಲದಲ್ಲೂ ಹಾವೇರಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಬವಣೆ ಕಂಡು ಬರುತ್ತಿದೆ. ಸ್ಥಳೀಯ ಸಂಸ್ಥೆಗಳು ಅಲ್ಲಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸುವ ಮೂಲಕ ನೀರಿನ ಹಾಹಾಕಾರ ತಪ್ಪಿಸಲು ಯತ್ನಿಸಿವೆಯಾದರೂ ಶುದ್ಧ ಕುಡಿಯುವ ನೀರು ಜನರಿಗೆ ಪೂರೈಸುವಲ್ಲಿ ವಿಫಲವಾಗಿವೆ ಎಂದೇ ಹೇಳಬೇಕು.
ಸತತ ಮಳೆಯಿಂದಾಗಿ ಜಿಲ್ಲೆಯ ಎಲ್ಲ ಕೊಳವೆ ಬಾವಿಗಳು ಮರುಜೀವ ಪಡೆದುಕೊಂಡಿವೆ. ಹಾವೇರಿ ತಾಲೂಕು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಕೊಳವೆ ಬಾವಿಗಳಲ್ಲಿ ಗಡಸು ನೀರು ಬೀಳುತ್ತಿರುವುದರಿಂದ ಕುಡಿಯಲು ಹಾಗೂ ಆಹಾರ ಬೇಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪರ್ಯಾಯ ವ್ಯವಸ್ಥೆ
ನದಿಗಳಲ್ಲಿ ಹರಿದು ಪೋಲಾಗುವ ನೀರನ್ನು ಸಂಗ್ರಹಿಸಿ, ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸಲು ಆದಷ್ಟು ಶೀಫ್ರದಲ್ಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಆಯಾ ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡುವುದು ಅಗತ್ಯವಾಗಿದೆ.
ಹೂಳು ತುಂಬಿಕೊಂಡಿವೆ
ಜಿಲ್ಲೆಯ ಬಹಳಷ್ಟು ಕೆರೆ ಹಾಗೂ ಹೊಂಡಗಳಲ್ಲಿ ಹೂಳು ತುಂಬಿಕೊಂಡಿದ್ದರಿಂದ ಉತ್ತಮ ಮಳೆಯಾದರೂ ಅವುಗಳಲ್ಲಿ ನೀರು ಸಂಗ್ರಹಿಸಿಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳು ಮಳೆಗಾಲದ ಪೂರ್ವದಲ್ಲೇ ಕೆರೆ ಹಾಗೂ ಹೊಂಡಗಳ ಹೂಳೆತ್ತುವ ಕಾರ್ಯವನ್ನು ನಡೆಸಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿ ಉಲ್ಬಣಿಸಿದಾಗ ಎಚ್ಚತ್ತುಕೊಳ್ಳುವ ಅಧಿಕಾರಿ ವರ್ಗ, ಆಗ ಕೆರೆ ಹಾಗೂ ಹೊಂಡಗಳ ಹೊಳೆತ್ತುವ ಕಾರ್ಯಕ್ಕೆ ಮುಂದಾಗುತ್ತದೆ.
ಆದರೆ, ಮತ್ತೆ ಮಳೆಗಾಲ ಆರಂಭವಾಗುವವರೆಗೆ ಕೆರೆ ಹಾಗೂ ಹೊಂಡಗಳಲ್ಲಿ ಕಸ ತುಂಬಿಕೊಂಡಿರುತ್ತದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಶ್ರೀಸಾಮಾನ್ಯರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
15 ದಿನಕ್ಕೊಮ್ಮೆ...
ಈ ಮಳೆಗಾಲದಲ್ಲಿಯೂ ಹಾವೇರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳು ಕರದಾತರಿಂದ ನಿಯಮಿತವಾಗಿಯೇ ಕರ ವಸೂಲಿ ಮಾಡುತ್ತಾರೆ.
ಆದರೆ, ಮೂಲಸೌಕರ್ಯ ಒದಗಿಸಿಕೊಡುವಂತೆ ಸಾರ್ವಜನಿಕರಿಂದ ಒತ್ತಾಯ ಬಂದಾಗ ನೂರೆಂಟು ಕಾರಣಗಳನ್ನು ಹೇಳಿ ಅಧಿಕಾರಿಗಳು ನುಣುಚಿಕೊಳ್ಳಲು ಯತ್ನಿಸುತ್ತಾರೆ ಎಂದು ಹಾವೇರಿ ಶಿವಾನಂದ ಗುಡಿಸಿಲಮನಿ ಆರೋಪಿಸುತ್ತಾರೆ.
ಮಳೆ ನೀರನ್ನು ಸಮರ್ಪಕವಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನತೆಯನ್ನು ಪಾರು ಮಾಡಲು ಜಿಲ್ಲಾಡಳಿತ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ನೀರು ಸಂಗ್ರಹಿಸಲು ಕ್ರಮ
ಸತತ ಮಳೆಯಿಂದಾಗ ಜಿಲ್ಲೆಯಲ್ಲಿ ಹರಿಯುತ್ತಿರುವ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಜನರಿಗೆ ತುಂಗಭದ್ರಾ ಹಾಗೂ ವರದಾ ನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸದ್ಯ ನದಿಯಲ್ಲಿ ಹರಿಯುತ್ತಿರುವ ನೀರನ್ನು ಬೇಸಿಗೆ ಸಮಯದಲ್ಲಿ ಜನರಿಗೆ ಪೂರೈಸಲು ಹಿಡಿದಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಪಾಂಡುರಂಗ ನಾಯಕ, ಜಿಲ್ಲಾಧಿಕಾರಿ
-ಬಿ.ಕೆ. ಮಹೇಂದ್ರ